ಎನ್‌ಚ್‌ಆರ್‌ಸಿ ರಜತಮಹೋತ್ಸವ ಲಾಂಛನ ಸ್ಪರ್ಧೆ : ವಿಜೇತರ ಘೋಷಣೆ

Update: 2018-07-06 14:26 GMT

ಹೊಸದಿಲ್ಲಿ, ಜು.6: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ದ ರಜತಮಹೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಲಾಂಛನ ರಚಿಸುವ  ಸ್ಪರ್ಧೆಯಲ್ಲಿ ಮುಂಬೈಯ ಬನ್ಸೀಲಾಲ್ ಕೇತಕಿ  ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. 

ಲಾಂಛನ ರಚಿಸುವ ಸ್ಪರ್ಧೆಯಲ್ಲಿ  893 ಮಂದಿ ಹಾಗೂ ಘೋಷಣಾ ವಾಕ್ಯ-ಟ್ಯಾಗ್‌ಲೈನ್  ರಚಿಸುವ ಸ್ಪರ್ಧೆಗೆ 4,237 ಮಂದಿ ಅರ್ಜಿ ಸಲ್ಲಿಸಿದ್ದರು. ಬನ್ಸೀಲಾಲ್ ಕೇತಕಿ ಪ್ರಥಮ ಸ್ಥಾನ ಪಡೆದು 50,000 ರೂ. ಪುರಸ್ಕಾರ ಮತ್ತು ಪ್ರಮಾಣಪತ್ರ ಗಳಿಸಿದ್ದಾರೆ. ಎನ್‌ಎಚ್‌ಆರ್‌ಸಿಯ ಹಾಲಿ ಲಾಂಛನಕ್ಕೆ ತ್ರಿವರ್ಣ ಧ್ವಜದ ಧ್ಯೇಯವನ್ನು ಬಳಸಿಕೊಂಡು ‘25’ ಎಂಬ ಅಂಕೆಯನ್ನು ಕಲಾತ್ಮಕವಾಗಿ ಜೋಡಿಸಿರುವ ಬನ್ಸೀಲಾಲ್ ಪ್ರಥಮ ಸ್ಥಾನದ ಶ್ರೇಯಸ್ಸು ಗಳಿಸಿದ್ದಾರೆ. ಘೋಷಣೆ/ಟ್ಯಾಗ್‌ಲೈನ್ ಬರೆಯುವ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ ತರ್ಬೇಜ್ ಖುರೇಶಿ ಪ್ರಥಮ ಸ್ಥಾನ ಗಳಿಸಿದ್ದಾರೆ.

 ‘ದೇಶ್ ಮೆ ವಿಕಾಸ್ ಕಿ ಆಯೇಗಿ ಬಹಾರ್, ಜಬ್ ಹೋಗ ಸುರಕ್ಷಿತ್ ಮಾನವ್ ಅಧಿಕಾರ್’ ಎಂಬ ಘೋಷಣಾ ವಾಕ್ಯ ಮತ್ತು ಇದರ ಟ್ಯಾಗ್‌ಲೈನ್- ಆವಾಝ್ ಆಪ್ಕೆ ಅಧಿಕಾರ್ ಕಿ ಎಂಬ ರಚನೆಗೆ ಪ್ರಥಮ ಸ್ಥಾನವನ್ನು ಖುರೇಶಿ ಪಡೆದಿದ್ದಾರೆ. ಇವರು ೨೦,೦೦೦ ರೂ.ನಗದು ಹಾಗೂ ಪ್ರಮಾಣ ಪತ್ರ ಪಡೆಯಲಿದ್ದಾರೆ.

೧೯೯೩ರ ಮಾನವ ಹಕ್ಕುಗಳ ರಕ್ಷಣೆಯ ಕಾಯ್ದೆಯಡಿ ೧೯೯೩ರ ಅಕ್ಟೋಬರ್ ೧೨ರಂದು ಎನ್‌ಎಚ್‌ಆರ್‌ಸಿಯನ್ನು ಸ್ಥಾಪಿಸಲಾಗಿದ್ದು ಈಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News