ಜೆಎನ್‌ಯು ಸಮಿತಿ ನಿರ್ಧಾರದ ವಿರುದ್ಧ ನ್ಯಾಯಾಲಯಕ್ಕೆ ಮನವಿ: ಉಮರ್ ಖಾಲಿದ್

Update: 2018-07-06 14:31 GMT

ಹೊಸದಿಲ್ಲಿ, ಜು.6: ತನ್ನನ್ನು ಅಮಾನತುಗೊಳಿಸುವ ನಿರ್ಧಾರವನ್ನು ಎತ್ತಿಹಿಡಿಯುವ ಜೆಎನ್‌ಯು ಸಮಿತಿಯ ಶಿಫಾರಸ್ಸಿನ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ತಿಳಿಸಿದ್ದಾರೆ.

ಅಫ್ಜಲ್ ಗುರುವನ್ನು ನೇಣಿಗೇರಿಸಿದ ಬಳಿಕ 2016 ರ ಫೆಬ್ರವರಿ 9 ರಂದು ಜವಾಹರಲಾಲ್ ನೆಹರೂ ವಿವಿ(ಜೆಎನ್‌ಯು) ಕ್ಯಾಂಪಸ್‌ನಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಿರುವ ಆರೋಪದಲ್ಲಿ ಉಮರ್ ಖಾಲಿದ್‌ರನ್ನು ಅಮಾನತುಗೊಳಿಸುವ ನಿರ್ಧಾರವನ್ನು ಜೆಎನ್‌ಯು ಸಮಿತಿ ಎತ್ತಿಹಿಡಿದಿತ್ತು. 

ಕಳೆದ ಎರಡು ವರ್ಷಗಳಲ್ಲಿ ಮೂರನೇ ಬಾರಿ ಜೆಎನ್‌ಯು ಆಡಳಿತವು ತನ್ನ ವಿರುದ್ಧ ಅಮಾನತು ಆದೇಶ ಜಾರಿಗೊಳಿಸಿದ್ದು ಎರಡು ಬಾರಿ ನ್ಯಾಯಾಲಯ ಈ ಆದೇಶವನ್ನು ತಳ್ಳಿಹಾಕಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಯಲ್ಲಿ ಖಾಲಿದ್ ತಿಳಿಸಿದ್ದಾರೆ. ಮತ್ತೊಮ್ಮೆ ಈ ವಿಚಾರಣೆ ಎಂಬ ಪ್ರಹಸನವನ್ನು ನಾವು ತಿರಸ್ಕರಿಸಿದ್ದೇವೆ.  ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ ಈ ಪ್ರಹಸನದಲ್ಲಿ ಒಳಗೊಂಡಿರುವ ಹಗೆತನ, ಸುಳ್ಳು ಮತ್ತು ವಿರೋಧಾಭಾಸವನ್ನು ಮತ್ತೊಮ್ಮೆ ಬಯಲಿಗೆಳೆಯಲಾಗುವುದು. ಇದನ್ನು ಮತ್ತೊಮ್ಮೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಖಾಲಿದ್ ತಿಳಿಸಿದ್ದಾರೆ.

ಆಡಳಿತಾರೂಢ ಬಿಜೆಪಿ ಮತ್ತು ಆರೆಸ್ಸೆಸ್‌ನ ಆದೇಶದಂತೆ ಕಾರ್ಯನಿರ್ವಹಿಸುತ್ತಿರುವ ಆಡಳಿತವರ್ಗವು ತನಿಖೆಯನ್ನು ಪಾರದರ್ಶಕವಾಗಿ ನಡೆಸುವ ಸ್ಥಿತಿಯಲ್ಲಿಲ್ಲ. ತನಿಖಾ ಪ್ರಕ್ರಿಯೆಯಲ್ಲಿರುವ ದೋಷವನ್ನು ನ್ಯಾಯಾಲಯ ಹಲವು ಬಾರಿ ಜಾಹೀರುಪಡಿಸಿದ್ದು  ನಮ್ಮ ಅಭಿಪ್ರಾಯವನ್ನು ಬೆಂಬಲಿಸಿದೆ . ಆಡಳಿತ ವರ್ಗದ  ಸ್ವೇಚ್ಛಾಚಾರದ ಕಾರ್ಯನಿರ್ವಹಣೆ ಮತ್ತು ನಿರಂಕುಶ ಆಡಳಿತದ ಎದುರು ಮಂಡಿಯೂರಲು ನಿರಾಕರಿಸುವ  ವಿದ್ಯಾರ್ಥಿ ಸಮುದಾಯದ ಆಯ್ದ ಕೆಲವರನ್ನು ಗುರಿಯಾಗಿರಿಸಿಕೊಂಡು ಅವರ ಧ್ವನಿಯನ್ನು ಅಡಗಿಸಲು  ನಡೆಸುತ್ತಿರುವ ಪ್ರಯತ್ನ  ಜೆಎನ್‌ಯು ಉನ್ನತಮಟ್ಟದ ತನಿಖಾ ಸಮಿತಿಯ ಇತ್ತೀಚಿನ ಆದೇಶದಲ್ಲಿ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾವು ಅಂತಿಮ ನಿವೇದನೆ ಮಾಡಿಕೊಳ್ಳಲು ಎರಡು ವಾರ ಇದೆ ಎನ್ನುವಾಗಲೇ ಸಮಿತಿ ಕೈಗೊಂಡಿರುವ ನಿರ್ಧಾರ ನಾಚಿಕೆಗೇಡಿನ ಮತ್ತು ಪ್ರತೀಕಾರದ ಕ್ರಮವಾಗಿದೆ. ಸರಕಾರದಿಂದ ಧನಸಹಾಯ ಪಡೆಯುವ ವ್ಯವಸ್ಥೆಯ ಮೇಲೆ ಅವರು ನಡೆಸುತ್ತಿರುವ  ಪ್ರಹಾರಕ್ಕೆ , ಸಾಮಾಜಿಕ ನ್ಯಾಯ ತತ್ವದ ಮೇಲೆ ಅವರು ನಡೆಸುತ್ತಿರುವ ಸಂಶೋಧನೆಗೆ ಇದು ನಿದರ್ಶನವಾಗಿದೆ. ಆದರೆ ನಾವು ಖಂಡಿತಾ ಅನ್ಯಾಯಕ್ಕೆ ತಲೆಬಾಗಲಾರೆವು ಎಂದು  ಖಾಲಿದ್ ತಿಳಿಸಿದ್ದಾರೆ.

ಅಫ್ಜಲ್ ಗುರುವಿಗೆ ನೇಣುಶಿಕ್ಷೆ ವಿಧಿಸಿದ ಬಳಿಕ ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿ ಪಿಎಚ್‌ಡಿ ವಿದ್ಯಾರ್ಥಿ ಖಾಲಿದ್ ಅಮಾನತು ಹಾಗೂ ವಿದ್ಯಾರ್ಥಿ ಸಂಘದ  ಅಂದಿನ ನಾಯಕ ಕನ್ಹಯ್ಯ ಕುಮಾರ್‌ಗೆ 10,000 ರೂ. ದಂಡ ವಿಧಿಸಿರುವುದನ್ನು ತನಿಖಾ ಸಮಿತಿಯು ಎತ್ತಿಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News