ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿ,ಇತರ ಇಬ್ಬರು ಎನ್‌ಐಎ ವಶದಲ್ಲಿ

Update: 2018-07-06 14:54 GMT

ಹೊಸದಿಲ್ಲಿ,ಜು.6: ದೇಶದ ವಿರುದ್ಧ ಯುದ್ಧವನ್ನು ಸಾರಿದ್ದಕ್ಕಾಗಿ ಮತ್ತು ಜಮ್ಮು-ಕಾಶ್ಮೀರದಲ್ಲಿ ದ್ವೇಷಪೂರಿತ ಭಾಷಣಗಳನ್ನು ಮಾಡಿದ್ದಕ್ಕಾಗಿ ಈ ವರ್ಷದ ಎಪ್ರಿಲ್‌ನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕತಾವಾದಿ ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆ ದುಖ್ತರನ್-ಎ-ಮಿಲ್ಲತ್(ಡಿಇಎಂ) ನ ಮುಖ್ಯಸ್ಥೆ ಆಸಿಯಾ ಅಂದ್ರಾಬಿ,ಸಹವರ್ತಿಗಳಾದ ಸೋಫಿ ಫೆಹ್ಮೀದಾ ಮತ್ತು ನಹೀದಾ ನಸ್ರೀನ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಶುಕ್ರವಾರ ತನ್ನ ವಶಕ್ಕೆ ತೆಗೆದುಕೊಂಡಿದ್ದು,ಅವರನ್ನು ದಿಲ್ಲಿಗೆ ಕರೆತರಲಾಗಿದೆ. ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 10 ದಿನಗಳ ಎನ್‌ಐಎ ಕಸ್ಟಡಿಯನ್ನು ವಿಧಿಸಲಾಗಿದೆ.

ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ಕಳೆದ ತಿಂಗಳು ಜಾಮೀನು ರದ್ದುಗೊಳಿಸಿದ ಬಳಿಕ ಈ ಮೂವರನ್ನೂ ಶ್ರೀನಗರದ ಜೈಲಿನಲ್ಲಿರಿಸಲಾಗಿತ್ತು.

ಎನ್‌ಐಎ ಕೇಂದ್ರ ಗೃಹಸಚಿವಾಲಯದ ನಿರ್ದೇಶಗಳ ಮೇರೆಗೆ ಎಪ್ರಿಲ್‌ನಲ್ಲಿ ಈ ಮೂವರ ಮತ್ತು ಅವರ ಸಂಘಟನೆಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

 ಅಂದ್ರಾಬಿಯ ಮೂಲಕ ಡಿಇಎಂ ಭಾರತದಿಂದ ಜಮ್ಮು-ಕಾಶ್ಮೀರದ ಪ್ರತ್ಯೇಕತೆಯನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಿದೆ ಮತ್ತು ಭಾರತದ ವಿರುದ್ಧ ಜಿಹಾದ್ ಮತ್ತು ಹಿಂಸಾಚಾರಕ್ಕೆ ಕರೆ ನೀಡಿದೆ. ಸಂಘಟನೆಯು ಧರ್ಮದ ಆಧಾರದಲ್ಲಿ ವಿವಿಧ ಸಮುದಾಯಗಳ ನಡುವೆ ಶತ್ರುತ್ವ,ದ್ವೇಷ ಮತ್ತು ಕೆಟ್ಟ ಭಾವನೆಗಳನ್ನು ಉತ್ತೇಜಿಸುತ್ತಿದೆ ಮತ್ತು ಸೌಹಾರ್ದತೆಗೆ ಭಂಗವನ್ನುಂಟು ಮಾಡುವ ಕೃತ್ಯಗಳನ್ನು ನಡೆಸುತ್ತಿದೆ ಎಂದು ಎನ್‌ಐಎ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.

ಅಂದ್ರಾಬಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಂದ ನೆರವು ಕೋರಿದ್ದು,ಭಾರತ ಸರಕಾರದ ವಿರುದ್ಧ ಯುದ್ಧವನ್ನು ಸಾರಲು ಸಹವರ್ತಿಗಳೊಂದಿಗೆ ಸೇರಿಕೊಂಡು ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾಗಿರುವುದಾಗಿಯೂ ಅದು ಬೆಟ್ಟು ಮಾಡಿದೆ.

ಈ ವರ್ಷದ ಎಪ್ರಿಲ್‌ನಲ್ಲಿ ಅನಂತನಾಗ್‌ನಲ್ಲಿ ಭಾರೀ ಪ್ರತಿಭಟನೆ ಮತು ಕಲ್ಲುತೂರಾಟವನ್ನು ನಡೆಸಲು ಹುನ್ನಾರದ ಆರೋಪದಲ್ಲಿ ಅಂದ್ರಾಬಿಯನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದು,ನ್ಯಾಯಾಲಯವು ಜಾಮೀನು ನೀಡಿದ್ದರೂ ಬಿಡುಗಡೆಗೊಳಿಸದೆ ಇನ್ನೊಂದು ಪ್ರಕರಣದಲ್ಲಿ ಬಂಧಿಸಿದ್ದರು.

ಪೊಲೀಸರು ಕೇಸ್ ಡೈರಿ ಮತ್ತು ತನಿಖೆಯ ವಿವರಗಳನ್ನು ಸಲ್ಲಿಸಿದ ಬಳಿಕ ಉಚ್ಚ ನ್ಯಾಯಾಲಯವು ಅಂದ್ರಾಬಿ ಮತ್ತು ಪ್ರಕರಣದಲ್ಲಿಯ ಇತರ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿತ್ತು. ಗಡಿಯಾಚೆಯ ಭಯೋತ್ಪಾದಕ ಸಂಘಟನೆಗಳ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನ್ನು ತೋರಿಸುವ ಅಂದ್ರಾಬಿಯ ಫೋನ್ ಕರೆಗಳ ವಿವರಗಳನ್ನೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News