ಕಾಲೇಜು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

Update: 2018-07-06 16:15 GMT

ಕರ್ನೂಲ್, ಜು.6: ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಿರಿಯ ವಿದ್ಯಾರ್ಥಿಗಳು ಮಾಡಿದ ರ್ಯಾಗಿಂಗ್ ಮತ್ತು ಹಲ್ಲೆಯಿಂದ ಬೇಸತ್ತ ನನ್ನ ಮಗ ಸಾವಿಗೆ ಶರಣಾಗಿದ್ದಾನೆ ಎಂದು ಮೃತನ ತಂದೆ ಆರೋಪಿಸಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಆಂಧ್ರ ಪ್ರದೇಶದ ಕಡಪ ಪಟ್ಟಣದ ಅರವಿಂದನಗರ ನಿವಾಸಿ ಕೊಮ್ಮ ಹರ್ಷ ಪ್ರಣೀತ್ ರೆಡ್ಡಿ ಎಂದು ಗುರುತಿಸಲಾಗಿದೆ. 20ರ ಹರೆಯದ ವಿದ್ಯಾರ್ಥಿಯ ದೇಹವು ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11.30ರ ಸುಮಾರಿಗೆ ರೆಡ್ಡಿ ತನ್ನ ಕೋಣೆಗೆ ತೆರಳಿದ್ದ. ಮಧ್ಯರಾತ್ರಿಯ ಸಮಯದಲ್ಲಿ ಆತನ ಸಹಪಾಠಿಯೋರ್ವ ಪುಸ್ತಕ ಕೇಳಲೆಂದು ರೆಡ್ಡಿ ಕೋಣೆಗೆ ತೆರಳಿದಾಗ ಕೋಣೆಗೆ ಒಳಗಿಂದ ಚಿಲಕ ಹಾಕಲಾಗಿತ್ತು ಮತ್ತು ಎಷ್ಟು ಬಾರಿ ಕರೆದರೂ ಸ್ಪಂದನೆ ದೊರೆತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳು ಕೋಣೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದಾಗ ರೆಡ್ಡಿ ದೇಹವು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ರೆಡ್ಡಿ ದೇಹವನ್ನು ಕೆಳಗಿಳಿಸಿದ ವಿದ್ಯಾರ್ಥಿಗಳನ್ನು ಸಮೀಪದಲ್ಲೇ ಇರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಆತನನ್ನು ಮೃತ ಎಂದು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ವಿದ್ಯಾರ್ಥಿಗಳು ಪೊಲೀಸರಿಗೆ ಹಾಗೂ ಕಾಲೇಜ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ನಂತರ ಮೃತ ವಿದ್ಯಾರ್ಥಿಯ ತಂದೆ ರಾಮನುಜುಲು ರೆಡ್ಡಿಗೆ ಸುದ್ದಿ ಮುಟ್ಟಿಸಲಾಗಿದೆ. ತನ್ನ ಮಗನ ಸಾವಿಗೆ ಹಿರಿಯ ವಿದ್ಯಾರ್ಥಿಗಳೇ ಹೊಣೆಯೆಂದು ಆರೋಪಿಸಿರುವ ರಾಮನುಜುಲು ರೆಡ್ಡಿ, “ನನ್ನ ಮಗನಿಗೆ ಹಿರಿಯ ವಿದ್ಯಾರ್ಥಿಗಳು ಮಾಡುತ್ತಿದ್ದ ರ್ಯಾಗಿಂಗ್ ಸಹಿಸಲಾಗುತ್ತಿರಲಿಲ್ಲ. ಹಾಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂದು ತಿಳಿಸಿದ್ದಾರೆ.

ಮೃತದೇಹದ ಮೇಲೆ ಹಲವು ಗಾಯಗಳಿದ್ದು ರ್ಯಾಗಿಂಗ್ ಭಾಗವಾಗಿ ನನ್ನ ಮಗನ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆಗಳೂ ಇವೆ ಎಂದು ಅವರು ಆರೋಪಿಸಿದ್ದಾರೆ. ನನ್ನ ಮಗ ಬಹಳ ಸೂಕ್ಷ್ಮ ಸ್ವಭಾವನಾಗಿದ್ದ. ಆದರೆ ಹೇಡಿಯಾಗಿರಲಿಲ್ಲ. ನನಗೆ ಕರೆ ಮಾಡುತ್ತಿದ್ದ ಆತ ಹಲವು ಬಾರಿ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡುತ್ತಿರುವ ಬಗ್ಗೆ ಹೇಳುತ್ತಿದ್ದ. ಆ ವೇಳೆ ಆತನಿಗೆ ಸಮಾಧಾನ ಹೇಳುತ್ತಿದ್ದ ನಾನು, ವೃತ್ತಿಪರ ಕಾಲೇಜುಗಳಲ್ಲಿ ಇದೆಲ್ಲ ಸಾಮಾನ್ಯ. ಅದನ್ನೆಲ್ಲ ಗಂಭೀರವಾಗಿ ಪರಿಗಣಿಸದೆ ಓದಿನತ್ತ ಗಮನಹರಿಸುವಂತೆ ಸಲಹೆ ನೀಡುತ್ತಿದ್ದೆ. ಈ ವಿಷಯವನ್ನು ಕಾಲೇಜು ಆಡಳಿತ ವರ್ಗದ ಬಳಿಯೂ ಹಲವು ಬಾರಿ ನಾನು ತಿಳಿಸಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ತಿಳಿಸಿದ್ದಾರೆ.

ಈ ಆರೋಪವನ್ನು ತಳ್ಳಿಹಾಕಿರುವ ಕರ್ನೂಲ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಜಿ.ಎಸ್ ರಾಮಪ್ರಸಾದ್, ನಮ್ಮ ಕಾಲೇಜಿನಲ್ಲಿ ರ್ಯಾಗಿಂಗನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಮಗೆ ರ್ಯಾಗಿಂಗ್ ಬಗ್ಗೆ ಯಾವುದೇ ದೂರುಗಳು ಕೂಡಾ ಬಂದಿಲ್ಲ. ಮೃತ ವಿದ್ಯಾರ್ಥಿಯು ಶೀಘ್ರದಲ್ಲೇ ಆರಂಭಗೊಳ್ಳಲಿದ್ದ ಸೆಮಿಸ್ಟರ್ ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News