ಸರಕಾರಿ ಜಮೀನಿನಲ್ಲಿ ಧಾರ್ಮಿಕ ಕಾರ್ಯ ನಡೆಸಬಹುದೇ: ವಿಸ್ತೃತ ಪೀಠವನ್ನು ಪ್ರಶ್ನಿಸಿದ ಸುಪ್ರೀಂ

Update: 2018-07-06 15:58 GMT

ಹೊಸದಿಲ್ಲಿ, ಜು.6: ಭಾರತದಂಥ ಜಾತ್ಯತೀತ ದೇಶದಲ್ಲಿ ಸರಕಾರಿ ಜಮೀನಿನಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಹುದೇ ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ವಿಸ್ತೃತ ಪೀಠವನ್ನು ಪ್ರಶ್ನಿಸಿದೆ.

ಜ್ಯೋತಿ ಜಾಗರಣ ಮಂಡಲ್ ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಎಫ್ ನಾರಿಮನ್ ಹಾಗೂ ಇಂದು ಮಲ್ಹೋತ್ರಾ ಅವರ ಪೀಠವು ವಿಸ್ತೃತ ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದೆ. ದಿಲ್ಲಿಯ ಉದ್ಯಾನವನದಲ್ಲಿ ಜಾಗರಣೆ ಮತ್ತು ದೇವಿಯ ಪೆಂಡಾಲ್ ಹಾಕಲು ಅನುಮತಿ ನೀಡದ ಪೌರಾಡಳಿತದ ಕ್ರಮವನ್ನು ಪ್ರಶ್ನಿಸಿ ಸಂಘಟನೆಯು ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಭಾರತ ಒಂದು ಜಾತ್ಯತೀತ ದೇಶ ಎಂಬುದನ್ನು ಗಮನದಲ್ಲಿಟ್ಟು ಇಂಥ ಧಾರ್ಮಿಕ ಚಟುವಟಿಕೆಗಳನ್ನು ಸರಕಾರಿ ಜಮೀನಿನಲ್ಲಿ ನಡೆಸಬಹುದೇ ಎಂಬ ಬಹಳ ಪ್ರಮುಖ ಪ್ರಶ್ನೆಗೆ ಸಂಬಂಧಿಸಿದ ವಿಷಯ ಇದಾಗಿದೆ ಎಂದು ಪೀಠವು ತಿಳಿಸಿದೆ.

ಇದಕ್ಕೂ ಮುನ್ನ ದಿಲ್ಲಿಯ ಮಾಯಾಪುರಿಯ ಲಜ್ವಂತಿ ಪ್ರದೇಶದಲ್ಲಿರುವ ಚಂಚಲ್ ಉದ್ಯಾನವನದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ರಾಷ್ಟ್ರೀಯ ಹಸಿರು ಪೀಠ ಅನುಮತಿ ನೀಡಿತ್ತು ಎಂದು ಸಂಘಟನೆ ತನ್ನ ಅರ್ಜಿಯಲ್ಲಿ ತಿಳಿಸಿದೆ. ಆದರೆ ನಂತರ ಈ ಅನುಮತಿಯನ್ನು ಹಿಂಪಡೆದ ಕಾರಣ ಸಂಘಟನೆಯು ರಸ್ತೆಯಲ್ಲೇ ಧಾರ್ಮಿಕ ಕಾರ್ಯವನ್ನು ನಡೆಸಿತ್ತು. ಸಂಘಟನೆಯ ಪರವಾಗಿ ವಕೀಲರಾದ ಫುಝೈಲ್ ಅಯ್ಯಬಿ ಮತ್ತು ಇಶಾ ಭಾರದ್ವಾಜ್ ವಾದಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News