ಚುನಾವಣಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಮುಖಂಡನ ಬಂಧನ

Update: 2024-04-30 05:55 GMT

PC : NDTV 

ಗುವಾಹತಿ: ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನದ ವೇಳೆ ಮತಗಟ್ಟೆಯ ಅಧ್ಯಕ್ಷಾಧಿಕಾರಿಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ಬಿಜೆಪಿ ಮುಖಂಡರೊಬ್ಬರನ್ನು ಬಂಧಿಸಲಾಗಿದೆ. ಮತಗಟ್ಟೆ ಅಧಿಕಾರಿಯ ಮೇಲೆ ಉತ್ತರ ತ್ರಿಪುರಾ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಕಾಜಲ್ ದಾಸ್ ಹಲ್ಲೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನೂ ಗುರುತು ಪತ್ತೆಯಾಗದ ಹಲವು ಮಂದಿ ಕೂಡಾ ಬಗ್‍ಬಾಸಾ ವಿಧಾನಸಭಾ ಕ್ಷೇತ್ರದ 22ನೇ ಮತಗಟ್ಟೆ ಕೇಂದ್ರದ ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಾಣಿಸುತ್ತಿದೆ. ಧರ್ಮನಗರ ಸಹಾಯಕ ಮತಗಟ್ಟೆ ಅಧಿಕಾರಿ ಈ ಸಂಬಂಧ ಕಾಜಲ್ ದಾಸ್ ವಿರುದ್ಧ ದೂರು ನೀಡಿದ್ದಾರೆ.

ಸೆಕ್ಟರ್ ಅಧಿಕಾರಿಗಳು, ಸೂಕ್ಷ್ಮ ವೀಕ್ಷಕರು ಮತ್ತು ವೈರಲ್ ಆಗಿರುವ ವಿಡಿಯೊ ವರದಿ ಪಡೆದು ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ದೂರು ದಾಖಲಾದ ಕದಂತಾಲ ಪೊಲೀಸ್ ಠಾಣೆ ಅಧಿಕಾರಿ ಜಯಂತ ದೇಬನಾಥ್ ಹೇಳಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 353, 332 ಮತ್ತು 13ರ ಅನ್ವಯ ಹಾಗೂ ಭಾರತೀಯ ದಂಡಸಂಹಿತೆ ಸೆಕ್ಷನ್ 34 ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಈಗಾಗಲೇ ವಿಡಿಯೊ ವಶಪಡಿಸಿಕೊಂಡಿದ್ದು, ಕಾಜಲ್‍ದಾಸ್ ಅವರನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News