ವಿಶ್ವವಿದ್ಯಾನಿಲಯ ಅನುದಾನ ಆಯೋಗವನ್ನು ರದ್ದುಪಡಿಸುವ ಕೇಂದ್ರ ಸರಕಾರದ ಪ್ರಸ್ತಾಪ

Update: 2018-07-06 18:40 GMT

ಈ ದೇಶದ ಶಿಕ್ಷಣರಂಗದಲ್ಲಿ ದುಡಿಯುತ್ತಿರುವ ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯ ಅನುದಾನ ಆಯೋಗವನ್ನು (ಯುಜಿಸಿ) ರದ್ದುಪಡಿಸಲು ಹೊರಟಿರುವ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ ಮತ್ತು ಶೈಕ್ಷಣಿಕ, ಅಕಡಮಿಕ್ ವಿಷಯಗಳಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು ಎಂದಿದ್ದಾರೆ. ಕಳೆದ ವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಯುಜಿಸಿಯನ್ನು ರದ್ದು ಮಾಡಿ, 1951ರ ಯುಜಿಸಿ ಕಾಯ್ದೆಗೆ ವಿದಾಯ ಹೇಳಿ, ಅದರ ಜಾಗದಲ್ಲಿ ಭಾರತ ಉನ್ನತ ಶಿಕ್ಷಣ ಆಯೋಗವನ್ನು (ಎಚ್‌ಇಸಿಐ) ಅಸ್ತಿತ್ವಕ್ಕೆ ತರುವ ಕುರಿತಾದ ನಿಯಮಾವಳಿಗಳಿರುವ ಹೊಸ ಮಸೂದೆಯ ಕರಡನ್ನು ಬಿಡುಗಡೆ ಮಾಡಿದೆ. ಈ ಕುರಿತಾದ ಸಲಹೆಗಳನ್ನು ಆನ್‌ಲೈನ್‌ನಲ್ಲಿ ನೀಡಲು ಸಾರ್ವಜನಿಕರಿಗೆ ಜುಲೈ 7ರ ವರೆಗೆ ಕಾಲಾವಕಾಶ ನೀಡಲಾಗಿದೆ. ಕರಡಿನ ಪ್ರಕಾರ ಎಚ್‌ಇಸಿಐಗೆ ಅನುದಾನ ಹಂಚುವ ಅಧಿಕಾರವಿರುವುದಿಲ್ಲ. ಈ ಅಧಿಕಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಮಾತ್ರ ಇರುತ್ತದೆ. ಎಚ್‌ಇಸಿಐ ಕೇವಲ ಶೈಕ್ಷಣಿಕ ವಿಷಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಸರಕಾರದ ಪ್ರಸ್ತಾಪದ ಬಗ್ಗೆ ಶೈಕ್ಷಣಿಕ ರಂಗದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸರಕಾರವು ಶೈಕ್ಷಣಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದಾಗಿ ಅವರು ಆಪಾದಿಸಿದ್ದಾರೆ.

ಯುಜಿಸಿಯ ಮಾಜಿ ಅಧ್ಯಕ್ಷ ಪ್ರೊ.ಸುಖದೇವ್ ಥೋರಟ್ ಹೇಳುವಂತೆ, ‘‘ಸಂಬಂಧಿತ ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡುವ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುತ್ತೇನೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಹೇಳುವಾಗ, ಅನುದಾನ ನೀಡಿಕೆಗೆ ಸಂಬಂಧಿಸಿದ ಕೆಲಸವನ್ನ್ನು ಅದು ಮಾಡುತ್ತದೋ ಅಥವಾ ಎಚ್‌ಇಸಿಐಯೋ ಎಂಬುದು ನಮಗೆ ಗೊತ್ತಿಲ್ಲ. ಅದೇನೇ ಇದ್ದರೂ, ಅನುದಾನ ಹಂಚಿಕೆಯು ಎಚ್‌ಆರ್‌ಡಿ ಸಚಿವಾಲಯದ ಕೈಯಲ್ಲಿರುವುದು ಅಪೇಕ್ಷಣೀಯವಲ್ಲ. ಅನುದಾನವು, ಶೈಕ್ಷಣಿಕ ಚಟುವಟಿಕೆ, ಕಾರ್ಯಕ್ರಮಗಳನ್ನು ಆಧರಿಸಿ ಇರಬೇಕಾದ್ದರಿಂದ ನಿಯಂತ್ರಕ ವ್ಯವಸ್ಥೆಯಾಗಿರುವ ಎಚ್‌ಇಸಿಐಯ ಕೈಯಲ್ಲೇ ಇರುವುದು ಅತ್ಯುತ್ತಮವೇ ಹೊರತು ಸಚಿವಾಲಯದ ವ್ಯಾಪ್ತಿಯಲ್ಲಿರುವುದಲ್ಲ’’.

‘‘ಯುಜಿಸಿಯಂತಹ ಒಂದು ಸಂಸ್ಥೆಯ ಸ್ವಾಯತ್ತೆಯನ್ನು ಉಳಿಸಿಕೊಳ್ಳಲೇಬೇಕು. ಕರಡು ಮಸೂದೆಯು ಸ್ವಾಯತ್ತೆಯ (ಅಟಾನಮಿ) ಮಹತ್ವವನ್ನು ಗುರುತಿಸುತ್ತದೆ. ಆದರೆ ಇದು ಕಾಲೇಜುಗಳ ಮತ್ತು ವಿಶ್ವವಿದ್ಯಾನಿಲಯಗಳ ಸ್ವಾಯತ್ತೆಯ ಪ್ರಶ್ನೆಯಷ್ಟೇ ಅಲ್ಲ, ಇದು ಆಯೋಗದ ಸ್ವಾಯತ್ತೆಯ ಪ್ರಶ್ನೆ ಕೂಡ’’.

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಆಯೆಶಾ ಕಿದ್ವಾಯಿ ಹೀಗೆ ಹೇಳುತ್ತಾರೆ:

‘‘ಹೊಸ ನಿಯಮಾವಳಿಗಳ ಪ್ರಕಾರ, ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ವಿಶ್ವವಿದ್ಯಾನಿಲಯದಲ್ಲಿ ಏನೇನಿದೆ ಎಂಬುದನ್ನು ಮಾತ್ರವಲ್ಲದೆ, ಒಂದು ದಶಕದ ಅವಧಿಯಲ್ಲಿ ಅದು ತಲುಪಲೇಬೇಕಾದ ಒಂದಷ್ಟು ಗುರಿಗಳನ್ನು ಕೂಡ ಆಧರಿಸಿ ಕಾಲೇಜುಗಳಿಗೆ, ವಿವಿಗಳಿಗೆ ಅನುದಾನ, ದೃಢೀಕರಣ ನೀಡಲಾಗುತ್ತದೆ ಎಂಬುದು ಸ್ಪಷ್ಟ. ಈ ಗುರಿಗಳು ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದವುಗಳಾಗಿರುತ್ತದೆ ಎಂದು ನಾವು ಇಷ್ಟರಲ್ಲೇ ನಿರೀಕ್ಷಿಸಬಹುದಾಗಿದೆ. ಈ ಕ್ರೋಡೀಕರಣ ಎಂಬ ಹೊರೆಯನ್ನು ಶುಲ್ಕಗಳ ಮೇಲೆ ಮತ್ತು ನೇಮಕಾತಿಗಳಲ್ಲಿ ಮಾಡುವ ಕಡಿತಗಳ ಮೇಲೆ ಹೊರಿಸಲಾಗುತ್ತದೆ. ಇದಕ್ಕಾಗಿ ಎಲ್ಲ ರೀತಿಯ ಕಳಪೆ, ಅಲ್ಪಕಾಲಿಕ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. ಅಂದರೆ ಹಳೆಯ ಹಾಗೂ ಹೊಸ ಎರಡೂ ವರ್ಗದ ವಿಶ್ವವಿದ್ಯಾನಿಲಯಗಳು ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯಬೇಕು’’.

ಖ್ಯಾತ ಶಿಕ್ಷಣ ತಜ್ಞ ಜಯಪ್ರಕಾಶ್ ಗಾಂಧಿಯವರ ಮಾತುಗಳು ಹೀಗಿವೆ:

‘‘ಇನ್ನು ಅಸ್ತಿತ್ವಕ್ಕೆ ಬರಲಿರುವ ಎಚ್‌ಇಸಿಐಯ ರಚನೆ ಹೇಗಿರುತ್ತದೆ ಎಂದರೆ ಅದು ಶೈಕ್ಷಣಿಕ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ನಿಜವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾದುದು ದೇಶವನ್ನು ಮುಂದಕ್ಕೆ ಕೊಂಡೊಯ್ಯಬಲ್ಲ ಶಿಕ್ಷಣ ತಜ್ಞರ ಮತ್ತು ಅಕಡಮೀಶಿಯನ್‌ಗಳ ಒಂದು ತಂಡ’’

ಡಿಯುಟಿಎಯ ಅಧ್ಯಕ್ಷ, ರಾಜೀವ್ ರಾ, ಹೀಗೆ ಹೇಳುತ್ತಾರೆ:

‘‘ಈಗ ಇರುವ ಯುಜಿಸಿಯ ಮೂಲಗುರಿಗಳು, ಸಾಧನೆಗಳು, ಅದರ ಕುಂದು-ಕೊರತೆಗಳು, ಆ ಕೊರತೆಗೆ ಸಂಭಾವ್ಯ ಕಾರಣಗಳು, ಕೊರತೆಗಳನ್ನು ನೀಗಿಸಲು ತೆಗೆದುಕೊಂಡ ಕ್ರಮಗಳು ಇತ್ಯಾದಿಗಳನ್ನು ವಿವರವಾಗಿ ಅಧ್ಯಯನ ಮಾಡದೆ ಅದನ್ನು ಸಂಪೂರ್ಣವಾಗಿ ಎತ್ತಂಗಡಿ ಮಾಡಲಾಗುತ್ತಿದೆ. ಅನುದಾನ ನೀಡುವ ಹಕ್ಕನ್ನು ಯುಜಿಸಿಯಿಂದ ಹೆಚ್ಚಾಗಿ ಸಚಿವಾಲಯಕ್ಕೆ ಸ್ಥಳಾಂತರಿಸುವುದರಿಂದ ಸರಕಾರದ ಹಸ್ತಕ್ಷೇಪ ಹೇಗೆ ಕಡಿಮೆಯಾಗುತ್ತದೆ ಎಂಬುದು ಗೊತ್ತಿಲ್ಲ. ಬದಲಾಗಿ ಹೀಗೆ ಮಾಡುವುದರಿಂದ ಸರಕಾರದ ನೇರ ಹಸ್ತಕ್ಷೇಪಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ. ಪ್ರಸ್ತಾವಿತ ಹೊಸ ಕಾಯ್ದೆಯು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತೆಗೆ ನೆರವಾಗುತ್ತದೆ ಎನ್ನಲಾಗಿದೆ. ಆದರೆ ಕಾಯ್ದೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ ಉನ್ನತ ಶಿಕ್ಷಣ ಆಯೋಗವೇ ನಿಗದಿತ ಕೋರ್ಸುಗಳ ಮೂಲಕ ಅಂತಿಮವಾಗಿ ಯಾವ ರೀತಿಯ ಕಲಿಕಾ ಫಲಿತಾಂಶ ಬರಬೇಕೆಂದು ನಿರ್ಧರಿಸುವ ಕೆಲಸವನ್ನು ಕೂಡಾ ಮಾಡುವುದಾದಲ್ಲಿ ಈ ಸ್ವಾಯತ್ತೆಯನ್ನೂ ಸಾಧಿಸುವುದು ಅಸಾಧ್ಯ.

ವಿದ್ಯಾರ್ಥಿ ಸಂಘಟನೆಗಳೂ ಸರಕಾರದ ಯುಜಿಸಿ ಪ್ರಸ್ತಾಪವನ್ನು ಖಂಡಿಸಿವೆ:

‘‘12 ಮಂದಿ ಸದಸ್ಯರಿರುವ ಆಯೋಗದಲ್ಲಿ ಎಸ್ಸಿ/ಎಸ್ಟಿ/ಒಬಿಸಿ/ಪಿಡಬ್ಲೂಡಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ. ಉನ್ನತ ಶಿಕ್ಷಣದಲ್ಲಿ ಸರಕಾರ ತರುವ ಸುಧಾರಣೆಗಳು ಬಹುಜನರ, ಎಲ್ಲ ಸಮುದಾಯಗಳ ಆವಶ್ಯಕತೆ, ಲಭ್ಯತೆ ಮತ್ತು ಗುಣಮಟ್ಟಕ್ಕೆ ಪ್ರತಿಸ್ಪಂದಿಸಬೇಕು; ಸಾಮಾಜಿಕ ಜವಾಬ್ದಾರಿಗೆ ಪ್ರತಿಕ್ರಿಯಿಸಬೇಕು; ನಿರ್ಧಾರ ತೆಗೆದುಕೊಳ್ಳುವ ಆಯೋಗದಲ್ಲಿ ಹಲವಾರು ವರ್ಗಗಳ ಪ್ರಾತಿನಿಧ್ಯವಿರುವುದು ಬಹಳ ಮುಖ್ಯ.’’

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಪ್ರೊ. ಕಪಿಲ್ ಶರ್ಮಾರ ಪ್ರಕಾರ, ‘‘ಪ್ರವೇಶಾತಿ ಪ್ರಕ್ರಿಯೆಯಿಂದ ಆರಂಭಿಸಿ, ಎಷ್ಟು ಸಂಶೋಧನಾ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಬೇಕು ಎಂಬಲ್ಲಿಯವರೆಗೆ, ಪ್ರತಿಯೊಂದು ವಿಷಯದಲ್ಲಿಯೂ ಹಸ್ತಕ್ಷೇಪ ನಡೆಸಲು ಸರಕಾರ ಪ್ರಯತ್ನಿಸುತ್ತದೆ. ಯುಜಿಸಿಯ ಕಾರ್ಯವಿಧಾನದಲ್ಲಿ ದೋಷಗಳಿದ್ದವು ಎಂಬುದನ್ನು ಅಲ್ಲಗಳೆಯುವುದಿಲ್ಲ. ಆದರೆ ಆ ದೋಷಗಳನ್ನು, ಕುಂದು-ಕೊರತೆಗಳನ್ನು, ಸಮಸ್ಯೆಗಳನ್ನು ಸಂಸ್ಥೆ ನಿರ್ದಿಷ್ಟ ನೆಲೆಯಲ್ಲಿ ಬಗೆಹರಿಸಬೇಕಾಗಿತ್ತು. ಇದನ್ನು ಉನ್ನತ ಶಿಕ್ಷಣರಂಗದ ತಜ್ಞರು ಮಾಡಬೇಕಿತ್ತೇ ಹೊರತು ಸರಕಾರವಲ್ಲ’’

ದಿಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಕ ಮತ್ತು ಅಕಡಮಿಕ್ ಕೌನ್ಸಿಲ್‌ನ ಸದಸ್ಯ ಸಚಿನ್ ನಿರ್ಮಲಾ ನಾರಾಯಣ್‌ರ ಅಭಿಪ್ರಾಯ ಹೀಗಿದೆ:

‘‘ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಮೂಲಚೌಕಟ್ಟು, ಸಂಪನ್ಮೂಲ ಒದಗಿಸುವ ಬದಲು ಸರಕಾರವು ಸಾರ್ವಜನಿಕ-ಖಾಸಗಿ-ವೈಯಕ್ತಿಕ ಪಾಲುದಾರಿಕೆ ಅಂತ ಏನೋನೋ ಹೇಳುತ್ತಿದೆ. ವಿಮರ್ಶಾತ್ಮಕ ಚಿಂತನೆಯ ತಾಣಗಳಾಗಿರುವ ವಿಶ್ವವಿದ್ಯಾನಿಲಯಗಳ ಮೇಲೆ ಸಂಪೂರ್ಣವಾದ ಆಡಳಿತಾತ್ಮಕ ಹಾಗೂ ಹಣಕಾಸು ನಿಯಂತ್ರಣ ಹೊಂದುವ ಮೂಲಕ ಇವುಗಳು ತಾನು ಹೇಳಿದಂತೆ ಕುಣಿಯುವಂತೆ ಮಾಡಲು ಪ್ರಯತ್ನಿಸುತ್ತಿವೆ.’’

‘‘ವಿದ್ಯಾರ್ಥಿಗಳು ನೀಡುವ ಶುಲ್ಕದಲ್ಲಿ ಹೆಚ್ಚಳ ಹಾಗೂ ಭಿನ್ನಮತ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಇನ್ನಷ್ಟು ದಮನಕ್ಕೆ ಎಚ್‌ಇಸಿಐ ಹಾದಿಮಾಡಿಕೊಡಲಿದೆ.

ಕೃಪೆ: ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News