ಎಂಎಸ್‌ಪಿ ಹೆಚ್ಚಳ ಶಿಫಾರಸಿನಷ್ಟಿಲ್ಲ: ಸ್ವಾಮಿನಾಥನ್

Update: 2018-07-06 18:51 GMT

ಹೆಚ್ಚಿನ ಎಂಎಸ್‌ಪಿ ಕೊಡುವುದು ಸ್ವಾಗತಾರ್ಹ ಬೆಳವಣಿಗೆಯಾದರೂ ಗೋಧಿ ಮತ್ತು ಭತ್ತದಂತೆ ಇತರ ಬೆಳೆಗಳನ್ನು ಕೊಳ್ಳುವ ವ್ಯವಸ್ಥೆ ಏನೇನೂ ಸಾಲದು. ಬೇಳೆಕಾಳುಗಳು ಬೆಳೆಯುವ ರೈತರ ಮಾರುಕಟ್ಟೆಯಲ್ಲಿ ಅನುಭವಿಸುತ್ತಿರುವ ಸಂಕಟದಿಂದ ಇದು ವೇದ್ಯವಾಗುತ್ತದೆ. ಉದ್ದು, ತೊಗರಿ, ಮೆಕ್ಕೆಜೋಳ, ಶೇಂಗಾ, ಸೋಯಾ, ಸಾಸಿವೆ ಮುಂತಾದ ಬೆಳೆಗಳು ಇದೇ ಮುಂಗಾರಿಗೆ ಮುನ್ನ ಮಂಡಿಗಳಲ್ಲಿ ಎಂಎಸ್‌ಪಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗಿವೆ.

ಕಳೆದ ನಾಲ್ಕು ವರ್ಷಗಳಿಂದ ನರೇಂದ್ರ ಮೋದಿ ಸರಕಾರದ ವಿರುದ್ಧ ರೈತ ಸಂಘಟನೆಗಳು ಹೊಸದಿಲ್ಲಿಯಲ್ಲಿ ಸಾಲು ಸಾಲು ಚಳವಳಿಗಳು ನಡೆಸಿದವು. ಕೃಷಿ ಬಿಕ್ಕಟ್ಟಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದವು. ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದ್ದವು. ತಮಿಳುನಾಡು ರೈತರಂತೂ ಸತ್ತ ರೈತರ ತಲೆಬುರುಡೆಗಳನ್ನು ಪ್ರದರ್ಶಿಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು. ಅರೆಬೆತ್ತಲೆ ಮೆರವಣಿಗೆ ಮಾಡಿದವರೆಷ್ಟೋ, ವುೂತ್ರ ಸೇವಿಸಿ ಪ್ರತಿಭಟಿಸಿದವರೆಷ್ಟೋ, ಮೊನ್ನೆ ಮೊನ್ನೆಯಷ್ಟೇ ಪಂಜಾಬ್ ಮತ್ತು ಹರ್ಯಾಣದ ರೈತರು ಡೀಸೆಲ್ ಬೆಲೆ ಏರಿಕೆಯಿಂದ ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂದು ಸಾವಿರಾರು ಟ್ರಾಕ್ಟರ್‌ಗಳನ್ನು ಬೀದಿಗಿಳಿಸಿ ಪ್ರತಿಭಟಿಸಿದ್ದರು. ನಗರಗಳಿಗೆ ಹಾಲು ತರಕಾರಿ ಸರಬರಾಜು ನಿಲ್ಲಿಸಿ ಪ್ರತಿರೋಧ ಒಡ್ಡಿದ್ದರು. ಊಹೂ., ನರೇಂದ್ರ ಮೋದಿ ಸರಕಾರದಲ್ಲಿ ಇದ್ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಸಿಗಲಿಲ್ಲ. ಇದೀಗ ಲೋಕಸಭಾ ಚುನಾವಣೆ ಹತ್ತಿರವಿದೆ. ನರೇಂದ್ರ ಮೋದಿ ಸರಕಾರ ಮೊನ್ನೆಯಷ್ಟೇ 14 ಬೆಳೆಗಳಿಗೆ ಎಂಎಸ್‌ಪಿ (ಬೆಂಬಲ ಬೆಲೆ) ಹೆಚ್ಚು ಮಾಡಿದೆ. ಹೆಚ್ಚೆಂದರೆ ಎಷ್ಟು? ಈಗ ನಾವು ಅರಿತುಕೊಳ್ಳಬೇಕಾದ ವಿಷಯವಿದು. ಇದು ಈಗಾಗಲೇ ಕೆಲ ರೈತ ಸಂಘಟನೆಗಳು ಡಿಮ್ಯಾಂಡ್ ಮಾಡುತ್ತಿದ್ದ ಸ್ವಾಮಿನಾಥನ್ ವರದಿಯ ಅನುಷ್ಠಾನವೇ ಅಥವಾ ಕಣ್ಣೊರೆಸುವ ತಂತ್ರವೇ ಅಥವಾ ಚುನಾವಣೆ ಗಿಮಿಕ್ ಅನ್ನೋಣವೇ!

ಇಂಥ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಎಂಎಸ್‌ಪಿ ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಅನ್ನುವುದರ ಬಗ್ಗೆ ಕೊಂಚ ಸರಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಎಂಎಸ್‌ಪಿಯಲ್ಲಿ ಮೂರು ಸಂಕೇತಾಕ್ಷರಗಳಿವೆ. A2, A2 + FL ಮತ್ತು C2. ಈ ಸಂಕ್ಷಿಪ್ತ ರೂಪದ ಅಕ್ಷರಗಳಲ್ಲಿ ಎಂಎಸ್‌ಪಿ ಲೆಕ್ಕಾಚಾರ ಅಡಗಿದೆ. ಇವುಗಳನ್ನು ಸರಳೀಕರಿಸಿ ನೋಡುವುದಾದರೆ ಬೆಳೆ ಬೆಳೆಯಲು ನೀವು ಖರ್ಚು ಮಾಡುವ ಯಾವುದೇ ಬಾಬ್ತು, ಅಂದರೆ ಬೀಜ, ಗೊಬ್ಬರ, ಕೀಟನಾಶಕ, ಟ್ರಾಕ್ಟರ್ ಬಾಡಿಗೆ ಇತ್ಯಾದಿಗಳನ್ನು ಒಂದು ಕಡೆ ಲೆಕ್ಕಹಾಕಿ ಅದನ್ನು A2 ಅನ್ನುತ್ತಾರೆ. ಇದರಲ್ಲಿ ಕೃಷಿ ಕೂಲಿ ಆಳುಗಳಿಗೆ ನೀಡುವ ಕೂಲಿಯೂ ಸೇರಿದೆ. ಇದು ಬೆಳೆ ಬೆಳೆಯಲು ರೈತನಿಗೆ ತಗುಲುವ ಖರ್ಚು. ಇದರೊಂದಿಗೆ ರೈತ ಕುಟುಂಬದ ಎಲ್ಲರೂ ಕೃಷಿ ಚಟುವಟಿಕೆಯ ಒಂದಿಲ್ಲೊಂದು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ, ಅದನ್ನು FL ಎಂಬ ಸಂಕ್ಷಿಪ್ತಾಕ್ಷರದ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. FL ಎಂದರೆ Family Labour. ಈಗ A2 ಜೊತೆಗೆ FL ಸೇರಿಸಿದರೆ ಅದು ((A2)+ FL+ ಆಗುತ್ತದೆ. ಇದೊಂದು ಲೆಕ್ಕಾಚಾರ.

ಇವುಗಳಷ್ಟೇ ಅಲ್ಲದೆ C2 ಎಂಬುದೊಂದಿದೆ. C2 ಎಂದರೆ Comprohensive Cost. ಇದರಲ್ಲಿ ರೈತನ ಹೊಲದ ಬಾಡಿಗೆ ಮೌಲ್ಯ ಹಾಗೂ ಅವನ ಆಸ್ತಿಯ ಮೊತ್ತದ ಮೇಲಿನ ಬಡ್ಡಿ ಒಳಗೊಂಡಿದೆ. ಈಗ A2 + FL ಜೊತೆಗೆ C2.

ಈ ರೀತಿಯಾಗಿ ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ CACP0 ರೈತರು ಬೆಳೆದ 23 ಬೆಳೆಗಳಿಗೆ ಪ್ರತಿವರ್ಷ ಎಂಎಸ್‌ಪಿ ಲೆಕ್ಕಾಚಾರ ಮಾಡುತ್ತದೆ. ಅದು ದೇಶದ ಎಲ್ಲಾ ಭೋಗೋಳಿಕ ಪ್ರದೇಶಗಳಿಗೆ, ಕೃಷಿ ಪರಿಸರಗಳಿಗೆ ನ್ಯಾಯಸಮ್ಮತವಾಗಿರುತ್ತದೆಯೇ ಅಥವಾ ಅವರು ತೆಗೆದುಕೊಳ್ಳುವ ಮೊತ್ತ ಆಖೈರಾಗಿರುತ್ತದೆಯೇ ಎಂಬೆಲ್ಲಾ ಪ್ರಶ್ನೆಗಳು ಬೇರೆ. ಆ ಬಗ್ಗೆ ಬೇರೆಯದ್ದೇ ಲೇಖನ ಬರೆಯಬಹುದು. ಅದಿರಲಿ ಇದೀಗ ಕೇಂದ್ರ ಸರಕಾರ ಎಂಎಸ್‌ಪಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಡಾ. ಎಂ. ಎಸ್. ಸ್ವಾಮಿನಾಥನ್ ಖುದ್ದು ಏನು ಹೇಳಿದ್ದಾರೆ ಎಂಬುದರ ಪೂರ್ಣ ಪಾಠ ಇಲ್ಲಿದೆ.

‘‘ರೈತರ ಆರ್ಥಿಕ ಸಂಕಷ್ಟಗಳನ್ನು ಅರಿತ ಕೇಂದ್ರ ಸರಕಾರ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದೆ. ಕೃಷಿ ಕ್ಷೇತ್ರದ ಆರ್ಥಿಕ ಮತ್ತು ಪಾರಿಸಾರಿಕ ಆರೋಗ್ಯ ಸರಿಯಿಲ್ಲ ಎಂಬುದು ರೈತ ಸಂಘಟನೆಗಳ ದೊಡ್ಡ ಹೋರಾಟಗಳಿಂದ ಮತ್ತು ರೈತರ ಆತ್ಮಹತ್ಯೆಗಳಿಂದ ಸ್ಪಷ್ಟವಾಗಿ ಕಾಣುತ್ತಿದೆ. ರೈತ ಸಂಘಟನೆಗಳ ಎರಡು ಮುಖ್ಯ ಬೇಡಿಕೆಗಳೆಂದರೆ, ಸಾಲ ಮನ್ನಾ ಮತ್ತು ಬೆಳೆಗಳಿಗೆ ಲಾಭದಾಯಕ ಬೆಲೆ.

ಮುಂಗಾರು ಮತ್ತು ಮಾರುಕಟ್ಟೆ ಈ ಎರಡೂ ಕೃಷಿ ಕ್ಷೇತ್ರದ ಸ್ಥಿರತೆ ಮತ್ತು ಲಾಭಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈಗಾಗಲೇ ಸರಕಾರ ಬೆಳೆ ವಿಮೆಗೆ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ, ಆದರೆ ಅದರ ರೀಚ್ ಮತ್ತು ಪ್ರಗತಿ ಸಮಾಧಾನಕರವಾಗಿಲ್ಲ. ಹೆಚ್ಚಿನ ಬೆಲೆ ಮತ್ತು ಸಾಲಗಳ ವಿಚಾರವಾಗಿ ಸಾಕಷ್ಟು ಸುಧಾರಣೆಗಳಾಗಬೇಕಿದೆ.

ರೈತರಿಗೆ ಸರಕಾರ ಕೊಡಬಹುದಾದ ಮಾರುಕಟ್ಟೆಯ

ಸಪೋರ್ಟ್‌ನಲ್ಲಿ ಮೂರು ಅಂಶಗಳಿರಬೇಕು.

1. ಎಂಎಸ್‌ಪಿ ಲೆಕ್ಕಾಚಾರದಲ್ಲಿ ಸರಕಾರ C2+ 50 ಶೇ. ನೀಡಬೇಕು.

2. ರೈತರಿಗೆ ಅನುಕೂಲಕರವಾಗುವಂತೆ ಬೆಳೆದ ಬೆಳೆಗಳನ್ನು ಕೊಳ್ಳುವ ವ್ಯವಸ್ಥೆ ಮಾಡಬೇಕು.

3. ಆಹಾರ ಭದ್ರತೆಯ ಕಾಯ್ದೆಯಡಿಯಲ್ಲಿ ದವಸ ಧಾನ್ಯಗಳ ಬಳಕೆ ಹೆಚ್ಚಿಸಬೇಕು, ಶಾಲೆಗಳ ಬಿಸಿಯೂಟದಲ್ಲಿಯೂ ಇದು ಸೇರಬೇಕು.

ಈಗ ಕೇಂದ್ರ ಸರಕಾರ ಪ್ರಕಟಿಸಿರುವ ಎಂಎಸ್‌ಪಿಯಿಂದ ಏನಾಗಿದೆ ಎಂಬುದನ್ನು ನೋಡೋಣ. ಹೊಸ ಎಂಎಸ್‌ಪಿ ಪ್ರಕಟಿಸಿರುವುವ ಹಿನ್ನೆಲೆಯಲ್ಲಿ ಹಿಂದೆ ಇದ್ದದ್ದಕ್ಕಿಂತ ಹೆಚ್ಚಾಯಿತೇ ಹೊರತು ನಾವು ಸೂಚಿಸಿದ್ದಷ್ಟರ ಮಟ್ಟಿಗೆ ಆಗಿಲ್ಲ. ಉದಾಹರಣೆಗೆ ಭತ್ತದ ಬೆಂಬಲ ಬೆಲೆ ಕ್ವಿಂಟಾಲ್ಗೆ 1,550 ರೂಪಾಯಿ ಇದ್ದದ್ದು 1,750ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷ ಇದ್ದ (C2) ಕಾಸ್ಟ್ ತೆಗೆದುಕೊಂಡಲ್ಲಿ (2017-18) ಕೃಷಿ ಒಳಸುರಿಗಳ ಬೆಲೆ ಹೆಚ್ಚಳವನ್ನು, (CACP) ತೆಗೆದುಕೊಳ್ಳುವ ಒಳಸುರಿಗಳ ವೆಚ್ಚದ ಇಂಡೆಕ್ಸ್ ಪ್ರಕಾರ 3.6ಶೇ. ಎಂದೇ ಊಹಿಸಿಕೊಂಡರೂ, ಈ ವರ್ಷದ ಅಂದರೆ 2018-19 ರ (C2) ವೆಚ್ಚ 1524. ಹಾಗಾಗಿ ಹೊಸದಾಗಿ ಕೊಟ್ಟಿರುವ ಎಂಎಸ್‌ಪಿ (C2) + 15 ಶೇ. ಆಗುತ್ತದೆಯೇ ಹೊರತು (C2+) 50ಶೇ. ಆಗುವುದಿಲ್ಲ. ರಾಗಿಯ ವಿಚಾರದಲ್ಲಿ (C2)+ 20 ಶೇ. ಆಗಿದೆ. ಅದೇ ರೀತಿಯಾಗಿ ಹೆಸರು ಕಾಳಿಗೆ 5,575 ಇದ್ದದ್ದು 6,975 ಮಾಡಲಾಗಿದೆ, ಇದು (C2)+19ಶೇ.

ಹೆಚ್ಚಿನ ಎಂಎಸ್‌ಪಿ ಕೊಡುವುದು ಸ್ವಾಗತಾರ್ಹ ಬೆಳವಣಿಗೆಯಾದರೂ ಗೋಧಿ ಮತ್ತು ಭತ್ತದಂತೆ ಇತರ ಬೆಳೆಗಳನ್ನು ಕೊಳ್ಳುವ ವ್ಯವಸ್ಥೆ ಏನೇನೂ ಸಾಲದು. ಬೇಳೆಕಾಳುಗಳು ಬೆಳೆಯುವ ರೈತರ ಮಾರುಕಟ್ಟೆಯಲ್ಲಿ ಅನುಭವಿಸುತ್ತಿರುವ ಸಂಕಟದಿಂದ ಇದು ವೇದ್ಯವಾಗುತ್ತದೆ. ಉದ್ದು, ತೊಗರಿ, ಮೆಕ್ಕೆಜೋಳ, ಶೇಂಗಾ, ಸೋಯಾ, ಸಾಸಿವೆ ಮುಂತಾದ ಬೆಳೆಗಳು ಇದೇ ಮುಂಗಾರಿಗೆ ಮುನ್ನ ಮಂಡಿಗಳಲ್ಲಿ ಎಂಎಸ್‌ಪಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗಿವೆ.

ರಾಷ್ಟ್ರೀಯ ರೈತ ಆಯೋಗ ಶಿಫಾರಸು ಮಾಡಿರುವಂತೆ ರೈತರಿಗೆ ಆದಾಯ ಸುಸ್ಥಿರತೆ ಮತ್ತು ಕೃಷಿ ಒಟ್ಟು ಆದಾಯ ಹೆಚ್ಚಳದ ಬಗ್ಗೆ ಗಮನಹರಿಸಬೇಕಿದೆ. ಅಂತರ್ಜಲದ ದುರ್ಬಳಕೆಗೆ ಕಡಿವಾಣ ಹಾಕಬೇಕು ಮತ್ತು ಪರಿಸರಕ್ಕೆ ಹಾನಿ ಮಾಡುವಂತಹ ಕೃಷಿ ಚಟುವಟಿಕೆಗಳನ್ನು ಆದಷ್ಟೂ ಕಡಿಮೆ ಮಾಡಬೇಕು.

ಒಟ್ಟಾರೆ ಕೃಷಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೆಚ್ಚಿನ ಎಂಎಸ್‌ಪಿ ನೀಡಿರುವುದನ್ನು ಸ್ವಾಗತಿಸುತ್ತಾ ರೈತ ಬೆಳೆದ ಬೆಳೆಗೆ ಕೊಳ್ಳುವ ವ್ಯವಸ್ಥೆ ಮತ್ತು ದಾಸ್ತಾನು ಮಾಡುವ ವ್ಯವಸ್ಥೆ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಬೇಕು.’’ ಎಂದು ಸ್ವಾಮಿನಾಥನ್ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

Writer - ಕೆ. ಎನ್. ನಾಗೇಶ್

contributor

Editor - ಕೆ. ಎನ್. ನಾಗೇಶ್

contributor

Similar News