ಕಲ್ಲು ತೂರಾಟಗಾರರ ಮೇಲೆ ಸೇನೆಯಿಂದ ಗುಂಡಿನ ದಾಳಿ: ಬಾಲಕಿ ಸೇರಿ ಮೂವರು ಮೃತ್ಯು

Update: 2018-07-07 15:47 GMT

ಶ್ರೀನಗರ,ಜು.7: ಕುಲ್ಗಾಮ್‌ನಲ್ಲಿ ಶನಿವಾರ ಪ್ರತಿಭಟನಾಕಾರರ ವಿರುದ್ಧ ಸೇನೆಯು ಗುಂಡಿನ ದಾಳಿ ನಡೆಸಿದ್ದು,ಹದಿಹರೆಯದ ಬಾಲಕಿಯೋರ್ವಳು ಸೆರಿದಂತೆ ಮೂವರು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ದುಖ್ತರನ್-ಎ-ಮಿಲ್ಲತ್ ಮುಖ್ಯಸ್ಥೆ,ಅನಾರೋಗ್ಯ ಪೀಡಿತೆ ಆಸಿಯಾ ಅಂದ್ರಾಬಿ ಮತ್ತು ಇಬ್ಬರು ಸಹವರ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ತನ್ನ ವಶಕ್ಕೆ ತೆಗೆದುಕೊಂಡಿರುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿಗಳು ನೀಡಿದ್ದ ಕರೆಯ ಮೇರೆಗೆ ಶನಿವಾರ ಕಾಶ್ಮೀರ ಕಣಿವೆಯಲ್ಲಿ ಬಂದ್ ಆಚರಿಸಲಾಗಿತ್ತು. ಅಂದ್ರಾಬಿ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೆಣೆಯಲಾಗುತ್ತಿದೆ ಎಂದು ಪ್ರತ್ಯೇಕತಾವಾದಿಗಳು ಆರೋಪಿಸಿದ್ದಾರೆ.

ಕುಲ್ಗಾಮ್‌ನ ಖುದ್ವಾನಿಯ ಹವೂರಾ ಪ್ರದೇಶದಲ್ಲಿ ಸೇನೆಯ ಗಸ್ತು ತಂಡ ಮತ್ತು ಪ್ರತಿಭಟನಾಕಾರರು ಮುಖಾಮುಖಿಯಾಗಿದ್ದು,ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪ್ರತಿಯಾಗಿ ಯೋಧರು ಗುಂಪಿನ ಮೇಲೆ ಗುಂಡುಗಳನ್ನು ಹಾರಿಸಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಘರ್ಷಣೆಗಳಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು,ಇತರ ಮೂವರಿಗೆ ಗುಂಡೇಟಿನ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಮೃತರನ್ನು ಶಾಕಿರ್ ಅಹ್ಮದ್ ಖಾಂಡೆ(22),ಇರ್ಷಾದ್ ಅಹ್ಮದ್(20) ಮತ್ತು ಅಂದ್ಲೀಬ್(16) ಎಂದು ಗುರುತಿಸಲಾಗಿದೆ.

“ಇದೊಂದು ನರಮೇಧ. ಪಡೆಗಳು ಕೊಲ್ಲುವ ಪ್ರವೃತ್ತಿಯನ್ನು ಮುಂದುವರಿಸಿವೆ ಮತ್ತು ಪ್ರತಿಭಟನಾಕಾರರ ವಿರುದ್ಧ ಯದ್ವಾತದ್ವಾ ಗುಂಡಿನ ದಾಳಿ ನಡೆಸಿವೆ” ಎಂದು ಹುರಿಯತ್ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಹೇಳಿದರು.

ಬಂದ್‌ನಿಂದಾಗಿ ಶನಿವಾರ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಜನಜೀವನ ವ್ಯತ್ಯಯಗೊಂಡಿತ್ತು. ಹೆಚ್ಚಿನ ಮಾರುಕಟ್ಟೆಗಳು,ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆ ವಿರಳವಾಗಿತ್ತಾದರೂ ಹೆಚ್ಚಿನ ಪ್ರದೇಶಗಳಲ್ಲಿ ಖಾಸಗಿ ಕಾರುಗಳು,ಟ್ಯಾಕ್ಸಿಗಳು ಮತ್ತು ಆಟೋಗಳು ಸಂಚರಿಸುತ್ತಿದ್ದವು.

ಸೈಯದ್ ಅಲಿ ಗೀಲಾನಿ,ಮಿರ್ವೈಝ್ ಉಮರ್ ಫಾರೂಕ್ ಮತ್ತು ಯಾಸಿನ್ ಮಲಿಕ್ ಸೇರಿದಂತೆ ಪ್ರಮುಖ ಪ್ರತ್ಯೇಕತಾವಾದಿ ನಾಯಕರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಟ್ರಾಲ್‌ನಲ್ಲಿ ಕರ್ಫ್ಯೂ ಹೇರಿಕೆ

ರವಿವಾರ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರಾನ್ ವಾನಿಯ ಸಾವಿನ ಎರಡನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಮತ್ತು ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಕಾಶ್ಮೀರದ ಹಲವೆಡೆಗಳಲ್ಲಿ ನಿರ್ಬಂಧಗಳನ್ನು ಹೇರಿದ್ದಾರೆ.

ವಾನಿಯ ಹುಟ್ಟೂರು,ಪುಲ್ವಾಮಾ ಜಿಲ್ಲೆಯ ಟ್ರಾಲ್‌ನಲ್ಲಿ ಕರ್ಫ್ಯೂ ಹೇರಲಾಗಿದೆ. ಶ್ರೀನಗರದ ನೋವಟ್ಟಾ ಮತ್ತು ಮೈಸುಮಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿರ್ಬಂಧಕಾಜ್ಞೆಗಳನ್ನು ಹೊರಡಿಸಲಾಗಿದೆ.

 2016,ಜು.8ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ವಾನಿ ಕೊಲ್ಲಲ್ಪಟ್ಟಿದ್ದ. ಆತನ ಹತ್ಯೆ ಕಣಿವೆಯಾದ್ಯಂತ ಭಾರೀ ಪ್ರತಿಭಟನೆಗಳು ಮತ್ತು ದೀರ್ಘಾವಧಿ ಕರ್ಫ್ಯೂ ಹೇರಿಕೆಗಳಿಗೆ ಕಾರಣವಾಗಿತ್ತು. ನಾಲ್ಕು ತಿಂಗಳ ಅವಧಿಯಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳಲ್ಲಿ 85 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದರು.

ಕಣಿವೆಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ವ್ಯಾಪಕ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News