ಕಾನೂನನ್ನು ಗೌರವಿಸುತ್ತಿದ್ದೇನೆ ಎಂದ ಕೇಂದ್ರ ಸಚಿವ ಜಯಂತ್ ಸಿನ್ಹಾ

Update: 2018-07-07 10:13 GMT

ರಾಂಚಿ, ಜು.7: ಗೋರಕ್ಷಣೆಯ ಹೆಸರಿನಲ್ಲಿ ವರ್ತಕರೊಬ್ಬರನ್ನು ಹೊಡೆದು ಸಾಯಿಸಿದ ಪ್ರಕರಣದಲ್ಲಿ ಅಪರಾಧಿಗಳೆಂದು ಗುರುತಿಸಲ್ಪಟ್ಟ ವ್ಯಕ್ತಿಗಳಿಗೆ ಹೂಹಾರ ಹಾಕಿ ಸನ್ಮಾನಿಸಿ ವಿವಾದಕ್ಕೀಡಾಗಿರುವ ಕೇಂದ್ರ ಸಚಿವ ಜಯಂತ್ ಸಿನ್ಹಾ  ಇಂದು ಸರಣಿ ಟ್ವೀಟ್ ಗಳನ್ನು ಮಾಡಿ ತಾನು ಕಾನೂನು ಪ್ರಕ್ರಿಯೆಯನ್ನು ಗೌರವಿಸುತ್ತಿರುವುದಾಗಿ ಹೇಳಿದ್ದಾರೆ

ತಾನು ಹಿಂಸೆಯನ್ನು ಹಾಗೂ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಖಂಡಿಸುವುದಾಗಿ ಹೇಳಿದ ಸಿನ್ಹಾ, ಅದೇ ಸಮಯ ಎಲ್ಲಾ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತ್ವರಿತಗತಿ ನ್ಯಾಯಾಲಯದ ತೀರ್ಪು ತಮಗೆ ಸಮಾಧಾನ ತಂದಿಲ್ಲ ಎಂದಿದ್ದಾರೆ.

ಕಳೆದ ವರ್ಷದ ಜೂನ್ 30ರಂದು ಅಲಿಮುದ್ದೀನ್ ಅನ್ಸಾರಿ ಎಂಬವರನ್ನು ಜಾರ್ಖಂಡ್ ರಾಜ್ಯದ ರಾಮಘರ್ ಎಂಬಲ್ಲಿ ಕಾರಿನಿಂದ ಹೊರಗೆಳೆದ ಗುಂಪೊಂದು ಅನ್ಸಾರಿ ಬಳಿ ಗೋಮಾಂಸವಿದೆಯೆಂದು ಥಳಿಸಿ ಕೊಂದಿತ್ತು. ಈ ಪ್ರಕರಣದ ಸಂಬಂಧ ಸ್ಥಳೀಯ ಬಿಜೆಪಿ ನಾಯಕನೊಬ್ಬ ಸೇರಿದಂತೆ ಹನ್ನೊಂದು ಮಂದಿಯನ್ನು ಬಂಧಿಸಲಾಗಿತ್ತು. ತ್ವರಿತಗತಿ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೂ ಜಾರ್ಖಂಡ್ ಹೈಕೋರ್ಟ್ ಎಂಟು ಮಂದಿಯ ಜೀವಾವಧಿ ಶಿಕ್ಷೆಗೆ ತಡೆ ಹೇರಿದೆ. ಪ್ರಕರಣದ ವಿಡಿಯೋದಲ್ಲಿ ಆರೋಪಿಗಳು ಜನರ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಅವರ ವಿರುದ್ಧ ಹಲ್ಲೆಯ ಆರೋಪವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕ, 45 ವರ್ಷದ ನಿತ್ಯಾನಂದ್ ಮಹತೋ ಕಳೆದ ತಿಂಗಳು ಬಿಡುಗಡೆಯಾಗಿದ್ದರೆ, ಈ ವಾರ ಇತರ ಏಳು ಮಂದಿ  ಜಾಮೀನಿನ ಮೇಲೆ ಹೊರ ಬಂದ ನಂತರ ಎಲ್ಲರನ್ನೂ ಹಝಾರಿಬಾಗ್ ನಲ್ಲಿರುವ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಮಂಗಳವಾರ ಕರೆದೊಯ್ಯಲಾಗಿತ್ತು. ಅಲ್ಲಿ ಸಚಿವ ಅವರಿಗೆ ಹಾರ ಹಾಕಿ ಅವರೊಂದಿಗೆ ತೆಗೆಸಿಕೊಂಡ ಫೋಟೋ ಈಗ ವಿವಾದಕ್ಕೀಡಾಗಿದೆ.

ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಸಿನ್ಹಾ ``ನನಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ  ಸಂಪೂರ್ಣ ನಂಬಿಕೆಯಿದೆ. ಆದರೆ ನಾನು ಕಾನೂನಿನ ಪ್ರಕ್ರಿಯೆಯನ್ನು ಗೌರವಿಸುತ್ತಿರುವಾಗ  ದುರದೃಷ್ಟವಶಾತ್ ನನ್ನ ಬಗ್ಗೆ ಬೇಜವಾಬ್ದಾರುಯುತ ಹೇಳಿಕೆಗಳನ್ನು ನೀಡಲಾಗುತ್ತಿದೆ, ನಿರ್ದೋಷಿಗಳಿಗೆ ಶಿಕ್ಷೆಯಾಗದು ದೋಷಿಗಳಿಗೆ ಖಂಡಿತ ಕಠಿಣ ಶಿಕ್ಷೆಯಾಗುತ್ತದೆ,'' ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News