ಕಾವೇರಿ ಪ್ರಾಧಿಕಾರದಿಂದ ಅನ್ಯಾಯ: ವಾಟಾಳ್ ನಾಗರಾಜ್

Update: 2018-07-07 14:27 GMT

ಬೆಂಗಳೂರು, ಜು.7: ಕಾವೇರಿ ಪ್ರಾಧಿಕಾರದ ರಚನೆಯಿಂದ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.

ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾವೇರಿ ಪ್ರಾಧಿಕಾರ ರಚನೆ ಖಂಡಿಸಿ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಾಧಿಕಾರದಿಂದ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗುತ್ತದೆ. ಕಾವೇರಿ ಜಲಾನಯನದ ಎಲ್ಲ ಪ್ರದೇಶದ ಎಲ್ಲ ಅಣೆಕಟ್ಟುಗಳನ್ನು ಕೇಂದ್ರಕ್ಕೆ ಗಿರವಿ ಇಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಪ್ರಾಧಿಕಾರವನ್ನು ಒಪ್ಪಬಾರದು. ಈ ಸಂಬಂಧ ಕಾನೂನು ಹೋರಾಟವನ್ನು ತೀವ್ರಗೊಳಿಸಬೇಕು. ಪ್ರಾಧಿಕಾರ ರಚನೆಯಿಂದ ಮೇಕೆದಾಟು ಕೈ ತಪ್ಪುತ್ತದೆ. ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಈ ಯಾವುದರ ಬಗ್ಗೆಯೂ ರಾಜ್ಯಪಾಲರ ಭಾಷಣದಲ್ಲಿ, ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲದಿರುವುದು ದುರದೃಷ್ಟಕರ ಎಂದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗಿದೆ. ಉತ್ತರ ಕರ್ನಾಟಕ ಭಾಗದವರೊಬ್ಬರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಒತ್ತಾಯ ಮಾಡಲಾಗಿತ್ತು. ಆದರೆ, ಕಡೆಗಣಿಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಹೋರಾಟಗಾರಾದ ಕೆ.ಆರ್.ಕುಮಾರ್, ಶಿವರಾಮೇಗೌಡ, ಪ್ರವೀಣ್‌ಕುಮಾರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News