ಲೋಕಾಯುಕ್ತರ ಭೇಟಿಗೆ ಗುರುತಿನ ಚೀಟಿ ಕಡ್ಡಾಯ

Update: 2018-07-07 14:59 GMT

ಬೆಂಗಳೂರು, ಜು.7: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣ ನಂತರ ಎಚ್ಚೆತ್ತುಕೊಂಡಿರುವ ಸರಕಾರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಲೋಕಾಯುಕ್ತ ಕಚೇರಿಯಲ್ಲಿ ಯಾರನ್ನಾದರೂ ಭೇಟಿ ಮಾಡಲು ಬರುವವರು ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ.

ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಇಬ್ಬರಲ್ಲಿ ಯಾರನ್ನೇ ಭೇಟಿ ಆಗಲು ಬಯಸುವವರು ಭಾವಚಿತ್ರವಿರುವ ಗುರುತಿನ ಚೀಟಿ ತರಬೇಕು. ಸ್ವಾಗತಕಾರರು ವ್ಯಕ್ತಿಯ ಫೋಟೋ ತೆಗೆದು ಅಲ್ಲಿಯೇ ಐಡಿ ಕಾರ್ಡ್ ಕೊಡಲಿದ್ದಾರೆ. ಜೊತೆಗೆ ಹೆಸರು, ವಿಳಾಸ, ಬಂದಿರುವ ಉದ್ದೇಶ, ಯಾರನ್ನು ಭೇಟಿ ಮಾಡಬೇಕು, ಮೊಬೈಲ್ ನಂಬರ್ ಇತ್ಯಾದಿ ದಾಖಲಾತಿ ನಮೂದಿಸಬೇಕಿದೆ.

ಸ್ವಾಗತಕಾರರಲ್ಲಿ ಐಡಿ ಕಾರ್ಡ್ ಪಡೆದ ನಂತರ ಅದನ್ನು ಧರಿಸಿ ತೆರಳಬೇಕು. ನಂತರ ಭದ್ರತಾ ಸಿಬ್ಬಂದಿ ಲೋಹ ಪರಿಶೋದಕ ಯಂತ್ರದಲ್ಲಿ ಚೆಕ್ ಮಾಡಿ ಕಚೇರಿ ಒಳಗೆ ಬಿಡಲಿದ್ದಾರೆ. ಲೋಕಾಯುಕ್ತರನ್ನು ಭೇಟಿ ಮಾಡಲು ಬಂದವರು ಮೊದಲು ಅವರ ಕಾರ್ಯದರ್ಶಿಯನ್ನು ಭೇಟಿ ಮಾಡಬೇಕು. ಅವರ ಜೊತೆ ಮಾತನಾಡಿ ಬಂದಿರುವ ಉದ್ದೇಶ ತಿಳಿಸಿದ ಮೇಲೆ ಲೋಕಾಯುಕ್ತ ಕಚೇರಿ ಒಳಗೆ ಬಿಡಲಾಗುತ್ತದೆ. ಈ ವೇಳೆ ಗನ್‌ಮ್ಯಾನ್ ಸ್ಥಳದಲ್ಲಿ ಹಾಜರಿರುತ್ತಾರೆ. ಕೆಲಸ ಮುಗಿದ ಮೇಲೆ ವೀಕ್ಷಕರ ಐಡಿ ಕಾರ್ಡ್ ವಾಪಸ್ ನೀಡುವುದು ಕಡ್ಡಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News