ಜೋರ್ಡಾನ್ ಗಡಿದಾಟು ಸಿರಿಯ ಸರಕಾರದ ವಶಕ್ಕೆ: ಶಸ್ತ್ರ ತ್ಯಜಿಸಿದ ದರಾ ಬಂಡುಕೋರರು

Update: 2018-07-07 16:57 GMT

ಅಮ್ಮಾನ್ (ಜೋರ್ಡಾನ್), ಜು. 7: ರಶ್ಯ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಯುದ್ಧವಿರಾಮ ಮಾತುಕತೆಯಲ್ಲಿ, ಶಸ್ತ್ರಗಳನ್ನು ತ್ಯಜಿಸಲು ದಕ್ಷಿಣ ಸಿರಿಯದ ಬಂಡುಕೋರರು ಒಪ್ಪಿದ್ದಾರೆ. ಇದರೊಂದಿಗೆ ದರಾ ಪ್ರಾಂತ ಸರಕಾರದ ವಶಕ್ಕೆ ಹೋಗಿದ್ದು, ಅಧ್ಯಕ್ಷ ಬಶರ್ ಅಸ್ಸಾದ್ ಮತ್ತು ಅವರ ಮಿತ್ರ ದೇಶ ರಶ್ಯಕ್ಕೆ ಸಿಕ್ಕಿದ ಇನ್ನೊಂದು ಮಹತ್ವದ ವಿಜಯವಾಗಿದೆ.

ರಶ್ಯ ಪಡೆಗಳ ಬೆಂಬಲದೊಂದಿಗೆ ನಡೆಸಿದ ಭೀಕರ ದಾಳಿಗಳ ಬಳಿಕ, ಜೋರ್ಡಾನ್-ಸಿರಿಯ ನಡುವಿನ ಮಹತ್ವದ ನಸ್ಸಿಬ್ ಗಡಿ ದಾಟನ್ನು ಸಿರಿಯ ಸರಕಾರಿ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ಬಂಡುಕೋರರು ಮೂರು ವರ್ಷಗಳಿಂದ ಈ ಗಡಿದಾಟನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು.

ಒಪ್ಪಂದದ ಬಗ್ಗೆ ಸರಕಾರಿ ಮಾಧ್ಯಮ ಯಾವುದೇ ಮಾಹಿತಿ ನೀಡಿಲ್ಲ.

ಸರಕಾರಿ ಪಡೆಗಳ ದಾಳಿಗೆ ಬೆದರಿ ಪಲಾಯನಗೈದಿರುವ ದರಾ ಪ್ರಾಂತದ ನಾಗರಿಕರ ಸುರಕ್ಷಿತ ವಾಪಸಾತಿಯ ಹೊಣೆಯನ್ನು ರಶ್ಯ ವಹಿಸಿಕೊಂಡಿದೆ ಎಂದು ಬಂಡುಕೋರ ಮೂಲಗಳು ಹೇಳಿವೆ. ಸುಮಾರು 3,20,000 ಮಂದಿ ನಾಗರಿಕರು ಈ ಪ್ರಾಂತದಿಂದ ಪರಾರಿಯಾಗಿದ್ದಾರೆ.

ಸಿರಿಯದ ಆಂತರಿಕ ಸಂಘರ್ಷ ಏಳನೇ ವರ್ಷಕ್ಕೆ ಕಾಲಿಟ್ಟಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಅಸ್ಸಾದ್ ಸರಕಾರ ತನ್ನ ಮಿತ್ರ ದೇಶಗಳ ನೆರವಿನಿಂದ ಸಿರಿಯದ ಹೆಚ್ಚಿನ ಭಾಗಗಳ ಮೇಲೆ ನಿಯಂತ್ರಣ ಹೊಂದಿದೆ.

ಆದಾಗ್ಯೂ, ಉತ್ತರ ಸಿರಿಯದ ಹೆಚ್ಚಿನ ಭಾಗಗಳು ಮತ್ತು ಪೂರ್ವ ಸಿರಿಯದ ಗಣನೀಯ ಭಾಗಗಳು ಈಗಲೂ ಅವರ ನಿಯಂತ್ರಣದಲ್ಲಿ ಇಲ್ಲ. ಈ ಪ್ರದೇಶಗಳಲ್ಲಿ ಟರ್ಕಿ ಮತ್ತು ಅಮೆರಿಕದ ಪಡೆಗಳು ನೆಲೆಸಿದ್ದು, ಸಿರಿಯ ಸರಕಾರಿ ಪಡೆಗಳ ಮುನ್ನಡೆಗೆ ತಡೆಯೊಡ್ಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News