ಪುತ್ರ ಜಯಂತ್ ಸಿನ್ಹಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯಶವಂತ್ ಸಿನ್ಹಾ

Update: 2018-07-08 07:42 GMT

ಹೊಸದಿಲ್ಲಿ, ಜು.8: ಗೋಸಾಗಾಟ ಶಂಕೆಯಲ್ಲಿ ವ್ಯಾಪಾರಿಯೊಬ್ಬರನ್ನು ಥಳಿಸಿ ಹತ್ಯೆಗೈದ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಯಾದ ಸಂದರ್ಭ ಆರೋಪಿಗಳಿಗೆ ಹಾರ ಹಾಕಿ ಸ್ವಾಗತಿಸಿದ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರ ಕ್ರಮವನ್ನು ಸಚಿವರ ತಂದೆ ಹಾಗೂ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಕಟುವಾಗಿ ಟೀಕಿಸಿದ್ದಾರೆ.

ಕೇಂದ್ರ ಸಚಿವರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಗನ ಕ್ರಮಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಇತ್ತೀಚೆಗೆ ಬಿಜೆಪಿಗೆ ಗುಡ್‍ಬೈ ಹೇಳಿರುವ ಸಿನ್ಹಾ ಸ್ಪಷ್ಟಪಡಿಸಿದ್ದಾರೆ. "ಹಿಂದೆ ನಾನು ಅರ್ಹ ಮಗನ ನಾಲಾಯಕ್ ತಂದೆಯಾಗಿದ್ದೆ. ಆದರೆ ಈಗ ಪಾತ್ರ ಬದಲಾಗಿದೆ" ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

ರಾಮಗಢ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದಾಗ ಜಯಂತ್ ಸಿನ್ಹಾ ಹಾರ ಹಾಕಿದ ಕ್ರಮಕ್ಕೆ ವಿರೋಧ ಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಸಚಿವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವರ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ, "ಈ ಮೂಲಕ ಬಿಜೆಪಿ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದೆ" ಎಂದು ಆಪಾದಿಸಿದೆ.

"ಪಾಶಕ್ಕೆ ಬಲಿಯಾಗಬೇಕಾದವರಿಗೆ ಹಾರ ಹಾಕುವಂಥ ಘಟನೆ ನವಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News