ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪತ್ರಕರ್ತರ ಆಧಾರ್ ವಿವರ ಕೇಳಿದ ಬಿಜೆಪಿ!

Update: 2018-07-08 07:58 GMT

ಹೊಸದಿಲ್ಲಿ, ಜು.8: ಈ ತಿಂಗಳ 9ರಂದು ಚೆನ್ನೈನಲ್ಲಿ ಅಮಿತ್ ಷಾ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ಪತ್ರಕರ್ತರು ಪಾಸ್ ಪಡೆಯಲು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಯ ವಿವರ ಅಥವಾ ಚಾಲನಾ ಲೈಸನ್ಸ್ ಸಂಖ್ಯೆಯನ್ನು ನೀಡುವಂತೆ ಸೂಚಿಸಲಾಗಿದೆ ಎಂದು theprint.in ವರದಿ ಮಾಡಿದೆ.

ತಮಿಳುನಾಡು ಬಿಜೆಪಿ ಘಟಕ ಈ ವಿವರಗಳನ್ನು ಕೇಳಿದ್ದು, ಪಾಸ್‍ಗಾಗಿ ಅರ್ಜಿ ನಮೂನೆ ಭರ್ತಿ ಮಾಡಿಕೊಡುವ ವೇಳೆ ಈ ವಿವರಗಳನ್ನೂ ಕಡ್ಡಾಯಪಡಿಸಲಾಗಿದೆ ಎನ್ನಲಾಗಿದೆ. ಈ ಅರ್ಜಿಯ ಜತೆಗೆ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಲಗತ್ತಿಸುವಂತೆ ಸೂಚಿಸಲಾಗಿದೆ. ಚೆನ್ನೈನ ವಿಜಿಪಿ ಗೋಲ್ಡನ್ ಬೀಚ್ ರೆಸಾರ್ಟ್‍ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷರು ಮತಗಟ್ಟೆ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು.

ವಾಹನಸಂಖ್ಯೆ, ಸಂಸ್ಥೆಯ ಹೆಸರು, ಸಂಪಾದಕರ ಹೆಸರು ಮತ್ತು ವಿವರಗಳನ್ನೂ ಕೇಳಲಾಗಿದೆ ಎಂದು ಆರೋಪಿಸಲಾಗಿದೆ. "ವಾಸ್ತವವಾಗಿ ನಮಗೆ ಈ ವಿವರ ಅಗತ್ಯವಿಲ್ಲ. ಆದರೆ ಹೊಸದಾಗಿ ಸೇರಿದ ಕೆಲ ಪತ್ರಕರ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೋರಿದ್ದಾರೆ. ಉನ್ನತ ಮಟ್ಟದ ಭದ್ರತೆ ದೃಷ್ಟಿಯಿಂದ ಎಸ್ಪಿಜಿ ಈ ವಿವರಗಳನ್ನು ಕೇಳಿದೆ. ಆದರೆ ಅದು ಕಡ್ಡಾಯವಲ್ಲ" ಎಂದು ತಮಿಳುನಾಡು ಬಿಜೆಪಿ ಮಾಧ್ಯಮ ಸಂಚಾಲಕ ಎ.ಎನ್.ಎಸ್.ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News