ಮಾವು ಬೆಳೆಗೆ ಬೆಂಬಲ ಬೆಲೆಗೆ ಚಿಂತನೆ: ಸಿಎಂ ಕುಮಾರಸ್ವಾಮಿ

Update: 2018-07-09 13:24 GMT

ಬೆಂಗಳೂರು, ಜು. 10: ರಾಜ್ಯದಲ್ಲಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಸರಕಾರ ಸಿದ್ಧ ಎಂದು ಘೋಷಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ನೆರೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅಭಯ ನೀಡಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಂಧ್ರದ ಚಿತ್ತೂರಿನಲ್ಲಿದ್ದ ಆಹಾರ ಸಂಸ್ಕರಣಾ ಘಟಕ ತನ್ನ ಭಾಗದಲ್ಲೇ ಬೆಳೆ ಹೆಚ್ಚಾಗಿದ್ದರಿಂದ ಹೊರ ರಾಜ್ಯದ ಮಾವು ಆಮದನ್ನು ನಿಷೇಧಿಸಿದೆ. ಅದೇ ರೀತಿ ಮಹಾರಾಷ್ಟ್ರದ ಆಹಾರ ಸಂಸ್ಕರಣ ಘಟಕದಲ್ಲಿ ಐವತ್ತು ಸಾವಿರ ಟನ್ ಸಂಸ್ಕರಿತ ಆಹಾರ ಹಾಗೇ ಉಳಿದಿದೆ. ಅಲ್ಲೂ ಮಾವು ಖರೀದಿ ಮಾಡಲು ಸಿದ್ಧವಿಲ್ಲ. ನಮಗೆ 17ರಿಂದ 20 ಕೋಟಿ ರೂ.ಹೊರೆಯಾದರೂ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಇದೇ ಮೊದಲ ಬಾರಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ ಎಂದರು.

ಆರಂಭದಲ್ಲೆ ಈ ಸಂಬಂಧ ಹೇಳಿಕೆ ನೀಡಿದ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಮಾವು ಬೆಳೆ ಪ್ರಮಾಣ ಕಡಿಮೆಯಾಗಿದ್ದರು, ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತಾಶರಾಗಿ ಮಾವನ್ನು ಬೀದಿಗೆ ಸುರಿದು ಪ್ರತಿಭಟಿಸುತ್ತಿದ್ದಾರೆ ಎಂದರು.
ಮಾವು ಬೆಳೆಗಾರರು ಸಂಕಷ್ಟದಲ್ಲಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಕೂಡಲೇ ಸರಕಾರ ಸ್ಪಂದಿಸುವ ಕೆಲಸ ಮಾಡಿದೆ ಎಂದ ಅವರು, ಪತ್ರಿ ಕೆ.ಜಿ. ಮಾವಿಗೆ ಎರಡೂವರೆ ರೂ.ಬೆಂಬಲ ಬೆಲೆ ನೀಡಲು ಸರಕಾರ ತೀರ್ಮಾನಿಸಿದ್ದು, ರೈತರು ಧರಣಿಯನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News