ಹಿಜ್ಬುಲ್ ಮುಜಾಹಿದ್ದೀನ್ ಸೇರಿದ ಐಪಿಎಸ್ ಅಧಿಕಾರಿಯ ತಮ್ಮ

Update: 2018-07-09 04:40 GMT

ಶ್ರೀನಗರ, ಜು.9: ಕಾಶ್ಮೀರ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಿಂದ ಕಳೆದ ಮೇ 22ರಂದು ನಾಪತ್ತೆಯಾಗಿದ್ದ ಶಂಸುಲ್ ಹಕ್ ಮೆಂಗ್ನೂ ಎಂಬ ಯುವಕ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಸೇರಿದ್ದಾನೆ. ಈತ ಈಶಾನ್ಯ ಕೇಡರ್ ಐಪಿಎಸ್ ಅಧಿಕಾರಿ ಇನಾಮುಲ್ ಹಕ್ ಅವರ ತಮ್ಮ. ಹಕ್ 2012ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ.

ಶಂಸುಲ್ ಹಕ್ ಬಂದೂಕು ಮತ್ತು ಪಿಸ್ತೂಲ್ ಹಿಡಿದಿರುವ ಫೋಟೊವನ್ನು ಸಂಘಟನೆ ಬಿಡುಗಡೆ ಮಾಡಿದೆ. ಹೊಸದಾಗಿ ಸಂಘಟನೆಗೆ ಸೇರಿದ ಹತ್ತಕ್ಕೂ ಹೆಚ್ಚು ಯುವಕರ ಚಿತ್ರವನ್ನು ಹಿಜ್ಬುಲ್ ಮುಜಾಹಿದ್ದೀನ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ಇದು ವೈರಲ್ ಆಗಿದೆ. ಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ಹತ್ಯೆಯ ಎರಡನೇ ವರ್ಷಾಚರಣೆ ಸಂದರ್ಭದಲ್ಲೇ ಈ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಶಂಸುಲ್ ಹಕ್ ಮೂಲತಃ ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆ ದ್ರಾಗುಡ್ ಗ್ರಾಮದವನಾಗಿದ್ದು, ಯುನಾನಿ ವೈದ್ಯಕೀಯ ಪದವಿ ಕೋರ್ಸ್ ಅರ್ಧಕ್ಕೆ ಬಿಟ್ಟಿದ್ದ. ಶ್ರೀನಗರದ ಹೊರವಲಯದ ಝಕೂರಾ ಕಾಲೇಜು ಕ್ಯಾಂಪಸ್‌ನಿಂದ ತಪ್ಪಿಸಿಕೊಂಡು ಮೇ 25ರಂದು ಸಂಘಟನೆ ಸೇರಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಶಂಸುಲ್ ಹಕ್ ನಾಪತ್ತೆಯಾಗಿರುವ ಬಗ್ಗೆ ಸಹೋದರರು ಮೇ 22ರಂದು ಪೊಲೀಸ್ ದೂರು ನೀಡಿದ್ದರು.

ಶಂಸುಲ್ ಹಕ್ ಚಿತ್ರದ ಜತೆಗೆ ಇರುವ ಶೀರ್ಷಿಕೆಯಲ್ಲಿ ಈತ ಮೇ 25ರಂದು ಸಂಘಟನೆಗೆ ಸೇರಿದ್ದು, ಈತನ ಕೋಡ್‌ನೇಮ್ ಬುರ್ಹಾನ್ ಸಾನಿ ಎಂಬ ವಿವರಣೆ ಇದೆ. ಕಳೆದ ಎರಡು ವರ್ಷಗಳಿಂದ ಕಾಶ್ಮೀರದಲ್ಲಿ ಉಗ್ರ ಸಂಘಟನೆ ಸೇರುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದು, ಸುಶಿಕ್ಷಿತ ಯುವಕರೂ ಉಗ್ರವಾದದಿಂದ ಪ್ರೇರಿತರಾಗುತ್ತಿದ್ದಾರೆ. ಈ ವರ್ಷ ಸುಮಾರು 50 ಯುವಕರು ಉಗ್ರ ಸಂಘಟನೆ ಸೇರಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News