ಕಥುವಾ ಘಟನೆ ಹಿಂದೆ ಜಿಹಾದಿಗಳ ಕೈವಾಡವಿದೆ ಎಂದ ಆರೋಪಿಗಳ ಪರ ವಕೀಲ

Update: 2018-07-09 08:10 GMT

ಜಮ್ಮು, ಜು.9: ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಜಿಹಾದಿಗಳ ಕೈವಾಡವಿದೆ ಹಾಗೂ ಇದರ ಹಿಂದೆ ಎಂಟು ವರ್ಷದ ಬಾಲಕಿಯ ಮೃತದೇಹವನ್ನು ಉದ್ದೇಶಪೂರ್ವಕವಾಗಿ ಇರಿಸಿ ಜಮ್ಮು ಕಾಶ್ಮೀರದ ಧಾರ್ಮಿಕ ಜನಸಂಖ್ಯೆಯ ಅನುಪಾತವನ್ನೇ ಪರಿವರ್ತಿಸುವ ಉದ್ದೇಶವಿತ್ತು ಎಂದು ಪ್ರಕರಣದ ಕೆಲ ಆರೋಪಿಗಳ ಪರ ವಕೀಲ ಅಂಕುರ್ ಶರ್ಮ ಹೇಳಿದ್ದಾರೆ.

ಅವರ ಈ ಹೇಳಿಕೆಗೆ ಯಾವುದೇ ಪೂರಕ ಸಾಕ್ಷ್ಯಗಳಿಲ್ಲದೇ ಇದ್ದರೂ  ಈ ಪ್ರಕರಣದ ದೂರುದಾರರು ಪಠಾಣ್ ಕೋಟ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ದಾಖಲಿಸಿ ಪೂರ್ಣಗೊಳಿಸಿದ ಮರುದಿನವೇ ಅವರ ಹೇಳಿಕೆ ಬಂದಿದೆ. ಪ್ರಕರಣದ ಮುಖ್ಯ ಆರೋಪಿ ಸಂಜಿ ರಾಮ್  ಅಲ್ಲಿನ ಅಲೆಮಾರಿ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದು, ಅವರು  ಗ್ರಾಮದಲ್ಲಿ ವಾಸಿಸದಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ದೂರುದಾರ ಆರೋಪಿಸಿದ್ದರು.

ಶನಿವಾರ ನ್ಯಾಯಾಲಯದಲ್ಲಿ ತನ್ನ ವಾದ ಮಂಡಿಸಿದ ಅಂಕುರ್ ಶರ್ಮ, ಪ್ರಕರಣದ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಅಂಕುರ್ ಶರ್ಮ ಮತ್ತಿತರ ಪ್ರತಿವಾದಿ ವಕೀಲರು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಿ ಸಿಬಿಐ ತನಿಖೆಗೆ ಕೋರಿದ್ದರು. ಆದರೆ ಈ ಕೋರಿಕೆಯನ್ನು ತಳ್ಳಿ ಹಾಕಿದ ನ್ಯಾಯಾಲಯ ವಿಚಾರಣೆಯನ್ನು ಕಥುವಾ ಸೆಶನ್ಸ್ ನ್ಯಾಯಾಲಯದಿಂದ ಪಂಜಾಬ್ ನ ಪಠಾಣಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ತಮ್ಮ ಕುರಿಗಳನ್ನು ಬೇಸಿಗೆ ಹಾಗೂ ಚಳಿಗಾಲದ ಸಮಯ  ರಾಜ್ಯದಲ್ಲಿ ಮೇಯಿಸುವ ಅಲೆಮಾರಿ ಸಮುದಾಯದವರಿಗೆ ಸರಕಾರಿ ಭೂಮಿಗಳಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಲು ಹಿಂದಿನ ಮೆಹಬೂಬಾ ಮುಫ್ತಿ ಸರಕಾರ ನೀಡಿದ್ದ ಆದೇಶ ವಾಪಸ್ ಪಡೆಯುವಂತೆಯೂ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News