ಮಳೆಹಾನಿ; ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಪರಿಶೀಲನೆ: ಸಚಿವ ದೇಶಪಾಂಡೆ

Update: 2018-07-09 13:14 GMT

ಬೆಂಗಳೂರು, ಜು. 10: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆ-ಅತಿವೃಷ್ಟಿಯಿಂದ ಆಗಿರುವ ಹಾನಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಮಳೆ ಅನಾಹುತದಿಂದ ಕರಾವಳಿಯಲ್ಲಿ 3 ಮಂದಿ ಪ್ರಾಣ ಕಳೆದುಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಮನೆಗಳು, ಉಡುಪಿಯಲ್ಲಿ 11 ಮನೆಗಳು ಹಾನಿಗೀಡಾಗಿವೆ. ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಳೆಯಿಂದ ಸಂಪೂರ್ಣ ಹಾನಿಗೊಳಗಾದರೆ 95 ಸಾವಿರ ರೂ., ಶೇ.15 ರಷ್ಟು ಹಾನಿಗೀಡಾದರೆ 5,200 ರೂ. ಹಾಗೂ ಶೇ.75ರಷ್ಟು ಹಾನಿಗೀಡಾದರೆ 75 ಸಾವಿರ ರೂ.ಪರಿಹಾರ ನೀಡಲಾಗುತ್ತಿದೆ ಎಂದ ಅವರು, ಪ್ರಾಣ ಹಾನಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 4 ಲಕ್ಷ ರೂ.ಹಾಗೂ ಸಿಎಂ ಪರಿಹಾರ ನಿಧಿಯಿಂದ 1ಲಕ್ಷ ರೂ.ಸೇರಿ 5 ಲಕ್ಷ ರೂ.ನೀಡಲಾಗುವುದು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 6.79 ಕೋಟಿ ರೂ., ಉಡುಪಿ ಜಿಲ್ಲಾಧಿಕಾರಿಗಳ ಬಳಿ 6 ಕೋಟಿ ರೂ. ಹಣವಿದ್ದು, ಮಳೆ ಹಾನಿಗೆ ಸಮರೋಪಾದಿ ಕ್ರಮ ಕೈಗೊಳ್ಳಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದ ಅವರು, ಮುನ್ನಚ್ಚರಿಕೆ ಕ್ರಮವಾಗಿ ಎನ್‌ಡಿಆರ್‌ಎಫ್ ತಂಡ ಮೊಕ್ಕಾಂ ಹೂಡಿದೆ ಎಂದು ಹೇಳಿದರು.

ಮಳೆ-ಅತಿವೃಷ್ಟಿ ಹಿನ್ನೆಲೆಯಲ್ಲಿ ರಸ್ತೆ, ಸೇತುವೆ ಸೇರಿದಂತೆ ದೊಡ್ಡ ಪ್ರಮಾಣದ ಹಾನಿಯಾಗಿದೆ ಎಂಬುದನ್ನು ತಾನು ಖುದ್ದು ಪರಿಶೀಲನೆ ನಡೆಸಿದ್ದು, ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಸಂಬಂಧ ಅಧಿಕಾರಿಗಳಿಂದ ವರದಿ ಪಡೆದು ಆ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಮಳೆ ಹಾನಿಯಿಂದ ಸಾವಿಗೀಡಾದವರಿಗೆ ನೀಡುತ್ತಿದ್ದ 4ಲಕ್ಷ ರೂ.ಪರಿಹಾರ ಮೊತ್ತದ ಜತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1ಲಕ್ಷ ರೂ.ಸೇರಿ ಒಟ್ಟು 5 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ’
-ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News