ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಮನೆಗಳ ಟೈಲ್ಸ್ ಗಳಲ್ಲಿ ಪ್ರಧಾನಿ ಮೋದಿ ಚಿತ್ರಗಳು!

Update: 2018-07-10 08:19 GMT

ಭೋಪಾಲ್, ಜು.10: ಮಧ್ಯಪ್ರದೇಶದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಮನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆವರ  ಚಿತ್ರಗಳಿರುವ ಟೈಲ್ಸ್  ಅಳವಡಿಸುವ ಕಾರ್ಯದಲ್ಲಿ ರಾಜ್ಯದ ನಗರಾಡಳಿತ ಇಲಾಖೆ ನಿರತವಾಗಿದೆ.

ನಗರಾಡಳಿತ ಇಲಾಖೆಯ ಈ ಕಾರ್ಯವನ್ನು ಬಿಜೆಪಿ ನಾಯಕ ಹಾಗೂ ಬೆತುಲ್ ನಗರ್ ನಿಗಮ್ ಅಧ್ಯಕ್ಷ ಅಲ್ಕೇಶ್ ಆರ್ಯ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಇಲಾಖೆಯ ಈ ಕೆಲಸದ ಬಗ್ಗೆ ಮಾತನಾಡಿದ ಅವರು, "ಹರ್ ಹರ್ ಮೋದಿ, ಘರ್ ಘರ್ ಮೋದಿ'' ಎಂದು ಅವರು ಹೇಳುತ್ತಾರಲ್ಲದೆ, "ಇದು ನಮಗೆ ಹೆಮ್ಮೆಯ ವಿಚಾರ.  ಬೇತುಲ್ ಪಟ್ಟಣದ ಒಟ್ಟು 1,500 ಮನೆಗಳಲ್ಲಿ ಇಂತಹ ಟೈಲ್ಸ್ ಕಾಣಬಹುದಾಗಿದೆ'' ಎಂದಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ  ಈ ಯೋಜನೆಯನ್ವಯ 1.19 ಲಕ್ಷ ಮನೆಗಳ ನಿರ್ಮಾಣವಾಗಿದ್ದು, ಟೈಲ್ಸ್ ಸರಬರಾಜಿಗೆ ಟೆಂಡರ್ ಆಹ್ವಾನಿಸಲಾಗಿದೆ. ಈ ನಿಟ್ಟಿನಲ್ಲಿ ನಗರಾಡಳಿತ ಇಲಾಖೆಯ ಎಪ್ರಿಲ್ 4ರ ಆದೇಶ ಹೀಗೆ ಹೇಳುತ್ತದೆ. ಪ್ರಧಾನಿ ಮತ್ತು ಮುಖ್ಯಮಂತ್ರಿಯ ಭಾವಚಿತ್ರಗಳಿರುವ 400 x 600 ಎಂಎಂ ಅಳತೆಯ ಎರಡು ಟೈಲ್ಸ್, ಒಂದನ್ನು ಮುಖ್ಯ ಗೇಟ್ ನಲ್ಲಿ ಹಾಗೂ ಇನ್ನೊಂದನ್ನು ಅಡುಗೆ  ಮನೆಯ ಪ್ಲ್ಯಾಟ್ ಫಾರ್ಮ್ ಮೇಲೆ ಪ್ರಧಾನ್ ಮಂತ್ರಿ ಆವಾಸ್ ಯೋಜನಾ (ಶಹರಿ 2022) ಅನ್ವಯ ಅಳವಡಿಸಬೇಕು'' ಎಂದಿದೆ.

ಇಂತಹ ಟೈಲ್ಸ್ ಹೆಚ್ಚಾಗಿ ಗುಜರಾತ್ ನಲ್ಲಿ ತಯಾರಾಗುತ್ತದೆ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಬಿಜೆಪಿಯ ಚುನಾವಣಾ ಅಜೆಂಡಾವಲ್ಲದೆ ಮತ್ತಿನ್ನೇನಲ್ಲ ಎಂದು  ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಮನಕ್ ಅಗರ್ವಾಲ್ ಹೇಳಿದ್ದಾರೆ. ರಾಜ್ಯ ನಗರಾಡಳಿತ ಸಚಿವ  ಮಾಯಾ ಸಿಂಗ್  ಸರಕಾರದ ಕ್ರಮವನ್ನು ಸಮರ್ಥಿಸಿದ್ದು, ಜನರಿಗೇ ತಮ್ಮ ಮನೆಗಳ ಟೈಲ್ಸ್ ಗಳಲ್ಲಿ ಇಂತಹ ಚಿತ್ರಗಳಿರಬೇಕೆಂಬ ಮನಸ್ಸಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News