ಸಿಗದ ಭಾರತೀಯ ಪೌರತ್ವ: ಪಾಕಿಸ್ತಾನಕ್ಕೆ ಹಿಂದಿರುಗುತ್ತಿರುವ ಹಿಂದೂಗಳು

Update: 2018-07-10 09:47 GMT
ಸಾಂದರ್ಭಿಕ ಚಿತ್ರ

ಜೈಸಲ್ಮೇರ್, ಜು.10: ಭಾರತದ ಪೌರತ್ವ ಪಡೆದು ಇಲ್ಲಿ ಹೊಸ ಜೀವನ ಆರಂಭಿಸುವ ಬಯಕೆಯೊಂದಿಗೆ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳು ಭಾರತದ ಪೌರತ್ವ ಸಿಗದೆ ಹಿಂದಿರುಗುವಂತಾಗಿದೆ. ಭಾರತದ ಪೌರತ್ವ ಪಡೆಯಲು ಆಗುತ್ತಿರುವ ವಿಳಂಬದಿಂದಾಗಿ ಹಲವರು ಮತ್ತೆ ಪಾಕಿಸ್ತಾನಕ್ಕೆ ಮರಳಲಾರಂಭಿಸಿದ್ದಾರೆ.

ಪಾಕಿಸ್ತಾನಕ್ಕೆ ಮರಳುತ್ತಿರುವ ಹಿಂದುಗಳ ಸಂಖ್ಯೆ  ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2000ಕ್ಕೂ ಅಧಿಕ ಮಂದಿ ಪಾಕಿಸ್ತಾನಕ್ಕೆ ಹಿಂದಿರುಗಿದ್ದಾರಲ್ಲದೆ ಅವರಲ್ಲಿ ಹೆಚ್ಚಿನವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ.

ತಾನು ಪಾಕಿಸ್ತಾನದ ಹಿಂದೂಗಳಿಗೆ ಪೌರತ್ವ ನೀಡುವುದಾಗಿ ಹಲವು ವರ್ಷಗಳ ಹಿಂದೆ ಭಾರತ ಘೋಷಿಸಿದ್ದು, ಜಿಲ್ಲಾಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಅಧಿಕಾರ ನೀಡಲಾಗಿತ್ತು. ಆದರೆ ಭಾರತೀಯ ಪೌರತ್ವ ನೀಡುವ ನಿಯಮಗಳು ಬಹಳ ಕಟ್ಟುನಿಟ್ಟಾಗಿದ್ದರಿಂದ ಪಾಕಿಸ್ತಾನದ ಹಿಂದೂಗಳಿಗೆ ಇಲ್ಲಿನ ಪೌರತ್ವ ಪಡೆಯುವುದು ಬಹಳ ಕಷ್ಟಕರವಾಗಿ ಪರಿಣಮಿಸಿತ್ತು.

ಪಶ್ಚಿಮ ರಾಜಸ್ಥಾನದ ಹಲವು ಪ್ರದೇಶಗಳಲ್ಲಿರುವ ಪಾಕಿಸ್ತಾನದ ನಿರ್ವಸಿತ ಹಿಂದೂಗಳು ಕಳೆದೊಂದು ದಶಕದಿಂದ ಭಾರತೀಯ ಪೌರತ್ವಕ್ಕಾಗಿ ಕಾಯುತ್ತಿದ್ದಾರೆ. ಪೌರತ್ವ ನೀಡುವ ಉದ್ದೇಶದಿಂದ ಕೇಂದ್ರವು ಎರಡು ಬಾರಿ ಶಿಬಿರಗಳನ್ನು ಆಯೋಜಿಸಿ  ಅಲ್ಲಿ ಅರ್ಜಿಗಳನ್ನು ತುಂಬಿಸಿ ಇತರ ಪ್ರಕ್ರಿಯೆಗಳನ್ನು ಪೂರೈಸಲಾಗಿದ್ದರೂ ಯಾರಿಗೂ ಪೌರತ್ವ ದೊರಕಿರಲಿಲ್ಲ.

2015ರಿಂದ 2017ರ ನಡುವೆ ಒಟ್ಟು 968 ಪಾಕ್ ಹಿಂದೂಗಳು ತಮ್ಮ ದೇಶಕ್ಕೆ ಮರಳಿದ್ದರೆ 2017ರಲ್ಲಿ 44 ಹಿಂದುಗಳು ಹಾಗೂ 2018ರಲ್ಲಿ ಇಲ್ಲಿಯ ತನಕ 59 ಮಂದಿ ಪಾಕಿಸ್ತಾನಕ್ಕೆ ಮರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News