ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಸಲು ಮಾಜಿ ಸಚಿವ ಎಚ್.ವಿಶ್ವನಾಥ್ ಒತ್ತಾಯ

Update: 2018-07-10 15:04 GMT

ಬೆಂಗಳೂರು, ಜು. 10: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೇರಿರುವುದು ಜನಸಾಮಾನ್ಯರಿಗೆ ಹೊರೆಯಾಗಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕು ಎಂದು ಜೆಡಿಎಸ್ ಹಿರಿಯ ಸದಸ್ಯ ಎಚ್.ವಿಶ್ವನಾಥ್, ಸಿಎಂ ಕುಮಾರಸ್ವಾಮಿ ಅವರನ್ನು ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಸಾಲಮನ್ನಾಕ್ಕೆ ಜನ ಸಾಮಾನ್ಯರ ಮೇಲೆ ಭಾರವನ್ನು ಹೇರಿದ್ದು, ಖಾರವಾಗಿದೆ. ಆದುದರಿಂದ ಸರಕಾರ ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಎಂದು ಕೋರಿದರು.

ಬೆಂಗಳೂರು ನಗರದ ಹೊರ ವರ್ತುಲ ರಸ್ತೆ, ಆರು ಎಲೆವೇಟೆಡ್ ರಸ್ತೆ ನಿರ್ಮಾಣ, ಮಕ್ಕಳ ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾನ್‌ಟೇಷನ್‌ಗೆ ಅನುದಾನ ಒದಗಿಸಿರುವುದು, ಸಿಳ್ಳೆಕ್ಯಾತ, ದೊಂಬಿದಾಸ ಸೇರಿದಂತೆ ಶೋಷಿತ ಸಮುದಾಯಗಳ ಅಭಿವೃದ್ಧಿಗೆ 10 ಕೋಟಿ ನೀಡಿರುವುದು ಹಾಗೂ ಹಿಂದುಳಿದ ಜಾತ್ಯತೀತ ಸಮುದಾಯದ ಮಠಗಳಿಗೆ 25 ಕೋಟಿ ರೂ. ಅನುದಾನ ನೀಡಿರುವುದು ಸ್ವಾಗತಾರ್ಹ ಎಂದರು.

ಅಧಿಕಾರ ವಿಕೇಂದ್ರಿಕರಣಕ್ಕೆ ಒತ್ತಾಯ: ಮನೆ, ನಿವೇಶನ, ಹಸು, ದನ, ಕೊಳವೆಬಾವಿ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲು ಶಾಸಕರ ಅಧ್ಯಕ್ಷತೆಯ ಸಮಿತಿ ತೀರ್ಮಾನಿಸುವುದಾದರೆ ಗ್ರಾ.ಪಂ., ತಾ.ಪಂ., ಜಿ.ಪಂ.ನ ಸದಸ್ಯರ ಅಗತ್ಯವೇನು? ಆಡಳಿತ ವಿಕೇಂದ್ರಿಕರಣ ಎಂದರೆ ಇದೇಯೇ? ಎಂದು ವಿಶ್ವನಾಥ್ ಪ್ರಶ್ನಿಸಿದರು.

ಸರಕಾರಿ ಶಾಲೆಗಳನ್ನು ಮುಚ್ಚುವಂತಹ ಸ್ಥಿತಿ ಬಂದಿದ್ದು ಏಕೆ? ಮನಸೋ ಇಚ್ಛೆ ಆಂಗ್ಲ ಮಾಧ್ಯಮಗಳ ಶಾಲೆಗಳಿಗೆ ಅನುಮತಿ ನೀಡಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳ ಮಕ್ಕಳು ಸರಕಾರಿ ಶಾಲೆಗೆ ಹೋಗುವುದಿಲ್ಲ. ಹೀಗೆ ಮುಂದುವರಿದರೆ ಭಾಷೆಗೆ ಗಂಡಾಂತರವಿದೆ ಎಂದು ವಿಶ್ವನಾಥ್ ಎಚ್ಚರಿಸಿದರು.

ಶಾಪಿಂಗ್ ಕಾಂಪ್ಲೆಕ್ಸ್: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಮ್ಮೆ ಸರಕಾರಿ ಕಚೇರಿಗಳ ಪರಿಸ್ಥಿತಿ ಅವಲೋಕಿಸಬೇಕು. ಸಿಬ್ಬಂದಿ ತಮ್ಮ ಕುರ್ಚಿಯಲ್ಲಿ ಇರುವುದಿಲ್ಲ. ಇಲ್ಲಿನ ಬಹುಮಹಡಿ ಕಟ್ಟಡದಲ್ಲಿ ಚಡ್ಡಿ, ಬನಿಯನ್, ತರಕಾರಿ ಸೇರಿದಂತೆ ಎಲ್ಲವನ್ನೂ ಮಾರಾಟ ಮಾಡುತ್ತಿದ್ದು, ಆ ಪ್ರದೇಶ ಒಂದು ರೀತಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಆಗಿದೆ. ಹೀಗಾದರೆ ಅವರು ಕೆಲಸ ನಿರ್ವಹಿಸಲು ಹೇಗೆ ಸಾಧ್ಯ ಎಂದು ಆಡಳಿತ ಯಂತ್ರಾಂಗವನ್ನು ತರಾಟೆಗೆ ತೆಗೆದುಕೊಂಡರು. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಕ್ಕೆ ಬರುವವರಲ್ಲಿ ಬಹಳಷ್ಟು ಮಂದಿ ವರ್ಗಾವಣೆ, ಅಮಾನತು, ಅನುದಾನ, ಅನುಮೋದನೆ ಇಂತಹ ಕೆಲಸಗಳಿಗೆ ಬರುತ್ತಾರೆ. ಆದರೆ, ಆಡಳಿತ ಕೇಂದ್ರಗಳಲ್ಲಿ ದಲ್ಲಾಳಿಗಳ ದರ್ಬಾರ್ ಮಿತಿ ಮೀರಿದೆ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಗ್ರಾಮ ಲೆಕ್ಕಿಗ, ಪೊಲೀಸ್ ಕಾನ್‌ಸ್ಟೇಬಲ್ ವರ್ಗಾವಣೆಯೂ ಸಚಿವಾಲಯದ ಮಟ್ಟದಲ್ಲಿ ಆಗುತ್ತಿದೆ. ವರ್ಗಾವಣೆ ವಿಕೇಂದ್ರೀಕರಣ ಆಗದ ಹೊರತು ಜನರಿಗೆ ನೀಡುವ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಿಲ್ಲ. ತಾಲೂಕು ಮಟ್ಟದ ಕೆಲಸದ ನಂತರ ವಿಭಾಗೀಯ ಮಟ್ಟ, ಜಿಲ್ಲಾ ಮಟ್ಟದಲ್ಲಿ ಕೆಲಸ ಆಗಬೇಕು ಎಂದು ಸಲಹೆ ನೀಡಿದರು. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಒಂದೇ ಇತ್ತು. ಇದೀಗ ಆ ಇಲಾಖೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗ ಎಂದು 4 ಇಲಾಖೆಗಳಾಗಿ ವಿಗಂಡಣೆ ಮಾಡಲಾಗಿದೆ. ಒಬ್ಬರೆ ಕಾರ್ಯದರ್ಶಿ ಇದ್ದ ಇಲಾಖೆಗೆ ನಾಲ್ಕು ಮಂದಿ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರನ್ನು ನೇಮಿಸಿದ್ದು, ಅವರೆಲ್ಲರಿಗೂ ವೇತನ-ಭತ್ಯೆ ನೀಡುತ್ತಿದ್ದು, ಇವರೇ ಹೊಸದನ್ನು ಸೃಷ್ಟಿಸುತ್ತಾರೇ? ಇದು ಜನರಿಗೆ ವಂಚನೆಯಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಆಡಳಿತ ಸುಧಾರಣೆ ಸಂಬಂಧದ ರಾಮಸ್ವಾಮಿ ವರದಿ ಧೂಳುತಿನ್ನುತ್ತಿದ್ದು, ಅದನ್ನು ಪರಿಶೀಲಿಸಬೇಕು. 31 ಸಾವಿರ ಕೋಟಿ ರೂ.ವೇತನ, 21 ಸಾವಿರ ಕೋಟಿ ರೂ. ಪಿಂಚಣಿ, 15 ಸಾವಿರ ಕೋಟಿ ರೂ.ಸಾಲದ ಮೇಲಿನ ಬಡ್ಡಿಗೆ ನೀಡಿದರೆ ಶೇ.78ರಷ್ಟು ಇದಕ್ಕೆ ಖರ್ಚಾಗುತ್ತದೆ. ಉಳಿದ ಶೇ.22ರಷ್ಟರಲ್ಲಿ ಜನರ ಕಲ್ಯಾಣ ಸಾಧ್ಯವೇ? ಎಂದ ಅವರು, ಅನಾವಶ್ಯಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು. ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಕಾನೂನುಗಳಿಗೆ ತಿದ್ದುಪಡಿ ತರಬೇಕು. ಅಕ್ಷರ ಮತ್ತು ಆರೋಗ್ಯಕ್ಕೆ ಸರಕಾರ ಆದ್ಯತೆ ನೀಡಬೇಕು. ಸರಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ವಿಶೇಷ ಆಸ್ಥೆ ವಹಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.

‘ಜಾತಿ-ಹಣದ ಬಲದಿಂದ ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಕುಳಿತಿರುವ, 1.5ಲಕ್ಷ ರೂ. ಮೊತ್ತದ ವೇತನ ಪಡೆಯುವ ನಮ್ಮ ಕುಲಪತಿಗಳಿಗಿಂತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಮಾತನಾಡುವ ಇಂಗ್ಲಿಷ್ ಉತ್ತಮವಾಗಿದೆ’
-ಎಚ್.ವಿಶ್ವನಾಥ್,  ಜೆಡಿಎಸ್ ಹಿರಿಯ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News