ವಿದೇಶಾಂಗ ಸಚಿವೆ ಇತ್ತೀಚೆಗೆ ಒರಟು ಮಾತುಗಳನ್ನು ಮಾತ್ರ ಕೇಳುತ್ತಿದ್ದಾರೆ ಎಂದ ಸುಷ್ಮಾ ಸ್ವರಾಜ್

Update: 2018-07-11 07:55 GMT

ಹೊಸದಿಲ್ಲಿ, ಜು.11: ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದಲ್ಲಿರುವ ಭಾರತೀಯ ಮಹಿಳೆಯೊಬ್ಬರು ಆಕ್ರೋಶದ ಮಾತುಗಳನ್ನಾಡಿದ ನಂತರ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಇತ್ತೀಚಿನ ದಿನಗಳಲ್ಲಿ  ತಾನು ಒರಟು ಮಾತುಗಳನ್ನು ಮಾತ್ರ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ನೀಡಿದ ಬಗ್ಗೆ ಆನ್ ಲೈನ್ ಟ್ರೋಲ್ ಗಳು ದ್ವೇಷಕಾರಿದ ನಂತರ ಸುಷ್ಮಾ ಸ್ವರಾಜ್ ರ ಈ ಹೇಳಿಕೆ ಹೊರಬಿದ್ದಿದೆ.

ವಿಮಾನದಲ್ಲೇ ಪಾಸ್ ಪೋರ್ಟನ್ನು ಮರೆತ ಭಾರತೀಯ ಮಹಿಳೆಯೊಬ್ಬರನ್ನು ಅಧಿಕಾರಿಗಳು ಇಂಡೋನೇಷ್ಯಾದ ಬಾಲಿಯಲ್ಲಿ ತಡೆದಿದ್ದರು. ಕೂಡಲೇ ಆ ಮಹಿಳೆ ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ರ ನೆರವು ಕೋರಿದ್ದು, ಸುಷ್ಮಾ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಆದರೆ ಭಾರತಕ್ಕೆ ಹಿಂದಿರುಗಲು ರಾಯಭಾರ ಅಧಿಕಾರಿಗಳಿಂದ ದೊರಕಿದ ಸ್ಪಂದನೆಯಿಂದ ಸಂತೃಪ್ತರಾಗದ ಮಹಿಳೆ, "ಸುಷ್ಮಾ ಸ್ವರಾಜ್ ದಯವಿಟ್ಟು ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎನ್ನುವುದನ್ನು ತಿಳಿಸಿ. ನಾನಿಲ್ಲಿ ಸಿಲುಕಿಕೊಂಡಿದ್ದೇನೆ" ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ, "ಮಗಳೇ, ನಿಮ್ಮ ಕೋಪವನ್ನು ಅರ್ಥ ಮಾಡಿಕೊಳ್ಳಬಲ್ಲೆ. ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಇಂಡೋನೇಷ್ಯಾದ ವಿದೇಶಾಂಗ ಸಚಿವರ ಜೊತೆಯೂ ಮಾತನಾಡಿದ್ದೇವೆ" ಎಂದು ಹೇಳಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ್ದ ಬಳಕೆದಾರರೊಬ್ಬರು ಮಹಿಳೆ ಸುಷ್ಮಾ ಜೊತೆ ಮಾತನಾಡಿದ್ದ ಒರಟು ಭಾಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ , "ತಪ್ಪು ತಿಳಿಯಬೇಡಿ. ವಿದೇಶಾಂಗ ವ್ಯವಹಾರಗಳ ಸಚಿವೆ ಇತ್ತೀಚಿನ ದಿನಗಳಲ್ಲಿ ಒರಟು ಭಾಷೆಯನ್ನಷ್ಟೇ ಕೇಳುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News