ಬಡ ಭಾರತೀಯರಿಗೆ ಲಭಿಸದ ಆರೋಗ್ಯಭಾಗ್ಯ

Update: 2018-07-12 05:36 GMT

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ಯೋಜನೆ ‘ಆಯುಷ್ಮಾನ್ ಭಾರತ’ಕ್ಕೆ ಹಿನ್ನಡೆಯಾಗಿದೆ ಎಂದು ವರದಿಯಾಗಿದೆ. ಇದರ ಜಾರಿ ಕಷ್ಟ ಸಾಧ್ಯ ಎಂದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ರಾಜಸ್ಥಾನ ಸರಕಾರಗಳು ತಿಳಿಸಿವೆ. ಹಾಗೆ ನೋಡಿದರೆ ಭಾರತದಲ್ಲಿನ ಆರೋಗ್ಯ ಸೇವೆಗಳ ಕುರಿತು ಜಾಗತಿಕ ಆರೋಗ್ಯ ಸೇವೆ ಹಾಗೂ ಗುಣಮಟ್ಟ ಸೂಚ್ಯಂಕ ವರದಿಯಲ್ಲಿ ಇರುವ ಮಾಹಿತಿ ಆತಂಕಕಾರಿಯಾಗಿದೆ. 2019ರ ಜಾಗತಿಕ ಸಮೀಕ್ಷಾ ವರದಿ ಪ್ರಕಾರ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಜಾಗತಿಕ ಸೂಚ್ಯಂಕದಲ್ಲಿ ಭಾರತ ಈಗ 145ನೇ ಸ್ಥಾನದಲ್ಲಿದೆ. ನಮ್ಮ ಪಕ್ಕದ ಭೂತಾನ್ 134ನೇ ಸ್ಥಾನದಲ್ಲಿದೆ. ಶ್ರೀಲಂಕಾ 71ನೇ ಸ್ಥಾನದಲ್ಲಿದೆ. ಚೀನಾ 48ನೇ ಸ್ಥಾನದಲ್ಲಿದೆ. ಆರೋಗ್ಯ ಸೇವೆಯಲ್ಲಿ ಈ ಎಲ್ಲ ದೇಶಗಳಿಗಿಂತ ಭಾರತ ಹಿಂದುಳಿದಿದೆ.

ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ 1990ರಲ್ಲಿ 153ನೇ ಸ್ಥಾನದಲ್ಲಿದ್ದ ಭಾರತ 2016ರಲ್ಲಿ ಪರಿಸ್ಥಿತಿಯಲ್ಲಿ ಸುಧಾರಿಸಿಕೊಂಡಿರುವುದು ನಿಜ. ಆದರೆ, ಒಟ್ಟಾರೆ ಪರಿಸ್ಥಿತಿ ಸಮಾಧಾನಕರವಾಗಿಲ್ಲ. ನಮ್ಮ ಉಳಿದ ನೆರೆಹೊರೆಯ ದೇಶಗಳೊಂದಿಗೆ ಹೋಲಿಸಿದರೆ ನಮ್ಮ ಸಾಧನೆ ಹೇಳಿಕೊಳ್ಳುವಂತಹದ್ದೇನೂ ಅಲ್ಲ. ಜಾಗತಿಕ ಗುಣಮಟ್ಟದ ಆಸ್ಪತ್ರೆಗಳು ಹಾಗೂ ಅತೀ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಕರ್ನಾಟಕದ ಸಾಧನೆ ಕೂಡ ಕಳಪೆಯಾಗಿದೆ. ಹಾಗೆ ನೋಡಿದರೆ ಆರೋಗ್ಯ ಸೇವೆಯಲ್ಲಿ ಕೇರಳ ಮತ್ತು ಗೋವಾ ರಾಜ್ಯಗಳ ಸಾಧನೆ ಗಮನಾರ್ಹವಾಗಿದೆ.

ಭಾರತವು ಹವಾಮಾನ, ಪರಿಸರ, ಆಹಾರ ಪದ್ಧತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿಭಿನ್ನತೆಗಳಿಂದ ಕೂಡಿದ ದೇಶವಾಗಿದೆ. ಇಂತಹ ಅನೇಕತೆಯಿಂದ ಕೂಡಿದ ದೇಶದಲ್ಲಿ ಏಕರೂಪಿಯಾದ ಆರೋಗ್ಯ ನೀತಿಯನ್ನು ರೂಪಿಸಿ ಜಾರಿಗೊಳಿಸುವುದು ಸುಲಭದ ಸಂಗತಿಯಲ್ಲ. ದೇಶದ ವೈವಿಧ್ಯವನ್ನು ಆರೋಗ್ಯ ನೀತಿಯು ಪ್ರತಿಬಿಂಬಿಸಬೇಕಾಗುತ್ತದೆ. ಅತ್ಯಂತ ಹಿಂದುಳಿದ ರಾಜ್ಯಗಳಾದ ಜಾರ್ಖಂಡ್, ಛತ್ತೀಸ್‌ಗಡ ಹಾಗೂ ಬಿಹಾರದಂತಹ ರಾಜ್ಯಗಳ ಬಗ್ಗೆ ವಿಶೇಷ ಆದ್ಯತೆ ನೀಡಬೇಕಾಗುತ್ತದೆ. ಇಷ್ಟೇ ಅಲ್ಲದೆ, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಕೂಡಾ ಆರೋಗ್ಯ ಸೇವೆಗೆ ಒಂದು ಸವಾಲಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಒಟ್ಟು ಆಂತರಿಕ ಉತ್ಪಾದನೆ(ಜಿಡಿಪಿ)ಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ನಾವು ಖರ್ಚು ಮಾಡುತ್ತಿರುವುದು ಶೇ.1.15ರಷ್ಟು ಮಾತ್ರ. ಚೀನಾ, ಕ್ಯೂಬಾ ಮುಂತಾದ ದೇಶಗಳಿಗೆ ಹೋಲಿಸಿದರೆ ಆರೋಗ್ಯ ಸೇವೆಗೆ ನಾವು ಖರ್ಚು ಮಾಡುತ್ತಿರುವ ಹಣ ತುಂಬಾ ಕಡಿಮೆಯಾಗಿದೆ. ಈ ಪ್ರಮಾಣ ಹೆಚ್ಚಾಗಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ.

ದೇಶದಲ್ಲಿ ಭೂಮಿ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ರಿಯಾಯಿತಿ ಬೆಲೆಯಲ್ಲಿ ಪಡೆಯುವ ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುವುದಿಲ್ಲ. ದೇಶದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳು ತಲೆ ಎತ್ತಿ ನಿಂತಿವೆ. ಆದರೂ ಆರೋಗ್ಯ ಸೇವೆ ಎಂಬುದು ಬಡವರಿಗೆ ಮರೀಚಿಕೆಯಾಗಿದೆ. ಬಡ ರೋಗಿಗಳತ್ತ ವಿಶೇಷ ಗಮನ ಹರಿಸಬೇಕೆಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಒಳರೋಗಿಗಳ ವಿಭಾಗದಲ್ಲಿ ಶೇ.20ರಷ್ಟು ಪ್ರಮಾಣವನ್ನು ಬಡತನ ರೇಖೆಯ ಕೆಳಗಿರುವವರಿಗೆ ಉಚಿತ ಚಿಕಿತ್ಸೆ ನೀಡಲು ಬಳಸಬೇಕೆಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಹೈಟೆಕ್ ಆಸ್ಪತ್ರೆಗಳು ಎಷ್ಟರ ಮಟ್ಟಿಗೆ ಈ ನಿರ್ದೇಶನವನ್ನು ಪಾಲಿಸುತ್ತಿವೆ ಎಂಬ ಬಗ್ಗೆ ರಾಜ್ಯ ಸರಕಾರ ಗಮನ ಹರಿಸಬೇಕಾಗಿದೆ.

ಕಾರ್ಪೊರೇಟ್ ಆಸ್ಪತ್ರೆಗಳ ಪರವಾಗಿರುವ ಆರೋಗ್ಯ ನೀತಿಯು ಸಣ್ಣಪುಟ್ಟ ಆಸ್ಪತ್ರೆಗಳು ಮತ್ತು ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಆದರೆ, ಎಲ್ಲರಿಗೂ ಆರೋಗ್ಯ ಭಾಗ್ಯ ಎಂಬ ಘೋಷಣೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ. ಗ್ರಾಮೀಣ ಪ್ರದೇಶದ ಬಡ ಜನರು ಹೆಚ್ಚಾಗಿ ಅವಲಂಬಿಸುವುದು ಸರಕಾರಿ ಆಸ್ಪತ್ರೆಗಳನ್ನು. ಆದರೆ, ಈ ಸರಕಾರಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಸಮಾಧಾನಕರವಾಗಿಲ್ಲ. ಈ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ 2018ರ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ವರದಿಯ ಪ್ರಕಾರ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿತ ವೈದ್ಯರಿದ್ದಾರೆ. ಆದರೆ, ಸರಕಾರಿ ಆಸ್ಪತ್ರೆಗಳಿಗೆ ಇವರ ಸೇವೆ ಲಭ್ಯವಾಗುತ್ತಿಲ್ಲ.

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ತಲೆ ಎತ್ತಿ ನಿಂತಿರುವ ಮೆಡಿಕಲ್ ಕಾಲೇಜುಗಳಿಂದ ಪ್ರತಿ ವರ್ಷ ಉತ್ತೀರ್ಣರಾಗಿ ಪದವಿ ಪಡೆದು ಬರುವ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ತಮ್ಮ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಉದ್ಯೋಗ ಅರಸಿ ವಿದೇಶಕ್ಕೆ ಹೋಗುತ್ತಾರೆ ಎಂಬುದು ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ. 2017ರ ಅಂಕಿಅಂಶಗಳ ಪ್ರಕಾರ 13,257 ಜನರಿಗೆ ಒಬ್ಬರು ಸರಕಾರಿ ವೈದ್ಯರು ಮಾತ್ರ ಸೇವೆಗೆ ಲಭ್ಯವಾಗಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹೆಚ್ಚುತ್ತಲೇ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ 2,136 ವೈದ್ಯರು ಕೆಲಸ ಮಾಡುತ್ತಿದ್ದಾರೆ. ಇನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಸಂಖ್ಯೆ 498 ಮಾತ್ರ. ಇದು ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯ ದುರವಸ್ಥೆಗೆ ಸಾಕ್ಷಿಯಾಗಿದೆ. ವಾಸ್ತವವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕನಿಷ್ಠ ಒಂದು ಸಾವಿರ ರೋಗಿಗಳಿಗೆ ಒಬ್ಬ ವೈದ್ಯರು ಸೇವೆಗೆ ಲಭ್ಯವಾಗಿರಬೇಕಾಗುತ್ತದೆ. ಆದರೆ, ಅಷ್ಟು ಸಂಖ್ಯೆಯಲ್ಲಿ ವೈದ್ಯರು ಸೇವೆಗೆ ಲಭ್ಯವಿಲ್ಲ. ವಿಶ್ವ ಗುರುವಾಗಲು ಹೊರಟಿರುವ ಭಾರತದಲ್ಲಿ ಹೆರಿಗೆಯ ಸಂದರ್ಭದಲ್ಲಿ ಸಾಯುತ್ತಿರುವ ತಾಯಂದಿರ ಸಂಖ್ಯೆ ಹೆಚ್ಚುತ್ತಲೇ ಇದೆ. ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಕಡೆ ಗಮನ ಕೊಡಬೇಕಾಗಿದೆ. ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ವೆಚ್ಚವನ್ನು 2025ರೊಳಗೆ ಜಿಡಿಪಿಯ ಶೇ.2.5ಕ್ಕೆ ಏರಿಕೆ ಮಾಡಲಾಗುವುದು ಎಂದು 2017ರ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಹೇಳಲಾಗಿದೆ. ಆದರೆ, ಆರೋಗ್ಯಕ್ಕಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚು ಮಾಡದೆ ಇರುವುದರಿಂದ ಆರೋಗ್ಯ ಸೇವೆಗಳಿಗಾಗಿ ಖಾಸಗಿ ಆಸ್ಪತ್ರೆಗಳ ಅವಲಂಬನೆ ಹೆಚ್ಚಾಗುತ್ತಿದೆ. ಹೀಗಾಗಿ ಭಾರತೀಯರು ತಮ್ಮ ಆದಾಯದ ಬಹುದೊಡ್ಡ ಮೊತ್ತವನ್ನು ಆರೋಗ್ಯ ಕಾಪಾಡಿಕೊಳ್ಳಲು ವ್ಯಯಿಸಬೇಕಾಗಿಬಂದಿದೆ. ಈ ತೀವ್ರಕರವಾದ ಆರೋಗ್ಯ ವೆಚ್ಚಗಳಿಂದಾಗಿ ಪ್ರತೀ ವರ್ಷ ಲಕ್ಷಾಂತರ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿಳಿಯುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.

ಸರಕಾರ ಆರೋಗ್ಯಕ್ಕಾಗಿ ಮಾಡುವ ವೆಚ್ಚವನ್ನು ಹೆಚ್ಚಳ ಮಾಡದಿದ್ದಲ್ಲಿ ರಾಷ್ಟ್ರೀಯ ಆರೋಗ್ಯ ಗುರಿಗಳ ಸಾಧನೆ ಕೂಡಾ ಕ್ಲಿಷ್ಟಕರವಾಗುತ್ತದೆ. ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದಿದ್ದಲ್ಲಿ ಜನರು ನಕಲಿ ವೈದ್ಯರ ಮೊರೆ ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗದಂತೆ ಸರಕಾರ ಎಚ್ಚರವಹಿಸಬೇಕಾಗುತ್ತದೆ. ಆರೋಗ್ಯ ಭಾಗ್ಯದಂತಹ ಯೋಜನೆಗಳನ್ನು ಪ್ರಕಟಿಸುವ ಸರಕಾರ ಎಲ್ಲಕ್ಕಿಂತ ಮೊದಲು ಸರಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ. ಈ ಆಸ್ಪತ್ರೆಗಳಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಎಲ್ಲಕ್ಕಿಂತ ದೊಡ್ಡ ಸಮಸ್ಯೆಯೆಂದರೆ ಸರಕಾರಿ ಆಸ್ಪತ್ರೆಗಳಲ್ಲಿ ಎದ್ದುಕಾಣುತ್ತಿರುವ ವೈದ್ಯಕೀಯ ಸಿಬ್ಬಂದಿಯ ಕೊರತೆ. ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ನೀಗಿಸದಿದ್ದರೆ ಸರಕಾರದ ಜನಾರೋಗ್ಯ ನೀತಿ ವಿಫಲಗೊಳ್ಳುತ್ತದೆ. ಆದ್ದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸಂದರ್ಭದಲ್ಲಿ ವೈದ್ಯಕೀಯ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಮುಂಗಡ ಪತ್ರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ ವಿನಿಯೋಗಿಸಿದರೆ ಸಾಲದು, ಅಲ್ಲಿ ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರದಲ್ಲಿರುವವರು ಕಾಳಜಿ ತೋರಿಸಿದರೆ ಮಾತ್ರ ವೈದ್ಯರ ಕೊರತೆಯನ್ನು ನೀಗಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News