'ಬಿಜೆಪಿ-ಆರೆಸ್ಸೆಸ್ ದೇಶಕ್ಕೆ ಸಮವಸ್ತ್ರ ಧರಿಸಲು ಹೊರಟಿದೆ: ಜೈರಾಮ್ ರಮೇಶ್

Update: 2018-07-12 12:25 GMT

ಬೆಂಗಳೂರು, ಜು.12: ಏಕಕಾಲಕ್ಕೆ ಒಂದು ದೇಶ-ಒಂದು ಚುನಾವಣೆ ನೀತಿ ಜಾರಿಗೊಳಿಸಿ, ದೇಶಕ್ಕೇ ಸಮವಸ್ತ್ರ ತೊಡಿಸಲು ಬಿಜೆಪಿ-ಆರೆಸ್ಸೆಸ್ ಸಂಚು ರೂಪಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಜೈರಾಮ್ ರಮೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ನಗರದ ಟೌನ್‌ಹಾಲ್ ಸಭಾಂಗಣದಲ್ಲಿ ಸಮಂಜಸ ಏರ್ಪಡಿಸಿದ್ದ, ‘ಏಕ ಕಾಲದಲ್ಲಿ ಲೋಕಸಭೆ-ವಿಧಾನಸಭೆ ಚುನಾವಣೆ ಸ್ಥಿತಿ-ಗತಿ’ ಕುರಿತ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಹು ಸಂಸ್ಕೃತಿಯುಳ್ಳ ಭಾರತದಲ್ಲಿ ಏಕತೆ, ಪ್ರಜಾಪ್ರಭುತ್ವವೇ ಮೂಲ ಬುನಾದಿಯಾಗಿದ್ದು, ಚುನಾವಣೆಗಳೇ ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್, ಒಂದೇ ನೀತಿ ಎನ್ನುವ ಮೂಲಕ ಇಡೀ ದೇಶಕ್ಕೇ ಸಮವಸ್ತ್ರ ತೊಡಿಸಲು ನಿರ್ಧಾರ ಮಾಡಿದ್ದಾರೆಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಅನೇಕ ಭಾಷೆ, ಸಂಸ್ಕೃತಿಗಳಿವೆ. ಒಂದೊಂದು ರಾಜ್ಯದಲ್ಲಿ ಭಿನ್ನ-ವಿಭಿನ್ನ ರಾಜಕೀಯ ವಾತಾವರಣವಿದೆ. ಹೀಗಿರುವಾಗ, ಒಂದು ದೇಶ-ಒಂದು ಚುನಾವಣೆ ಎನ್ನುವುದರಲ್ಲಿ ಅರ್ಥವೇ ಇಲ್ಲ ಎಂದ ಅವರು, ಒಂದು ವೇಳೆ ಚುನಾವಣೆ ನಡೆದರೆ, ಬಂಡವಾಳ ಶಾಹಿಗಳ ಕೈಯಲ್ಲಿ ದೇಶ ಇರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಟ್ಲರ್ ನೀತಿ: 1930ರಲ್ಲಿ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್, ಒಂದೇ ಸಂಸ್ಕೃತಿ, ಒಂದು ಜನಾಂಗ, ಓರ್ವ ನಾಯಕ ಎಂದು ಕರೆ ನೀಡಿದ್ದ. ಇದೇ ಮಾದರಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ, ಒಂದು ದೇಶ-ಒಂದು ತೆರಿಗೆ(ಜಿಎಸ್ಟಿ) ಜಾರಿಗೆ ತಂದ ಬೆನ್ನಲ್ಲೇ, ಒಂದು ದೇಶ-ಒಂದು ಚುನಾವಣೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಜೈರಾಮ್ ರಮೇಶ್ ನುಡಿದರು.

ದೇಶದೊಳಗೆ 2.5 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿವೆ. ಅದೇರೀತಿ, ನಗರಸಭೆ, ವಿಧಾನಸಭೆಗಳಿವೆ. ಒಂದು ಚುನಾವಣೆಯಲ್ಲಿ ಪ್ರಕಟವಾದ ಫಲಿತಾಂಶ ಮತ್ತೊಂದು ಚುನಾವಣೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದ ಅವರು, ಏಕ ನೀತಿಗಳಿಂದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದ್ದು, ಇದರ ವಿರುದ್ಧ ಜನಾಂದೋಲನ ರೂಪಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಜೈನ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಂದೀಪ್ ಶಾಸ್ತ್ರಿ ಮಾತನಾಡಿ, ದೇಶದಲ್ಲಿ ಒಂದೇ ಬಾರಿ ಚುನಾವಣೆ ನಡೆದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬ ಮಾತುಗಳು ಕೇವಲ ನೆಪ. ಯಾರಿಗೆ ಪ್ರಜಾಪ್ರಭುತ್ವದಲ್ಲಿ ಆಸಕ್ತಿ ಇಲ್ಲವೋ ಅವರೇ ಒಂದು ದೇಶ- ಒಂದು ಚುನಾವಣೆ ಬಗೆ ಮಾತನಾಡುತ್ತಾರೆ. ಚುನಾವಣೆ ಮೇಲೆಯೇ ಪ್ರಜಾಪ್ರಭುತ್ವ ನಿಂತಿದೆ. ಅದನ್ನೆ ಕೆಲವರು ನಿಲ್ಲಿಸಲು ಹೊಂಚು ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ದೇಶ ಸ್ವತಂತ್ರವಾದ ನಂತರ ಸತತ ಇಪ್ಪತ್ತೈದು ವರ್ಷಗಳ ಕಾಲ ಒಂದೇ ಸಮಯಕ್ಕೆ ಎರಡೂ ಚುನಾವಣೆ ನಡೆಯುತಿತ್ತು. ಆದರೆ, ಇದು ಕಷ್ಟದ ಕೆಲಸವೆಂದು ಬದಲಾವಣೆ ತರಲಾಯಿತು. ಆದರೆ, ಮತ್ತೆ ನಾವು ಹಿಂದಕ್ಕೆ ಹೋಗುವ ಅಗತ್ಯವೇನು ಎಂದು ಪ್ರಶ್ನೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಕಾಂಗ್ರೆಸ್ ನಾಯಕರಾದ ಪ್ರೊ.ಕೆ.ಈ.ರಾಧಾಕೃಷ್ಣ, ಮುರಳಿಧರ್ ಹಾಲಪ್ಪ, ಸಮಂಜಸ ಸಲಹೆಗಾರರಾದ ನಟರಾಜ್ ಗೌಡ, ಮಂಜುನಾಥ್ ಅದ್ದೆ, ಸಂಚಾಲಕ ಎಸ್.ಎ.ಅಹ್ಮದ್ ಸೇರಿ ಪ್ರಮುಖರಿದ್ದರು.

ಪಕ್ಷದ ಕಾರ್ಯಕರ್ತರಿಗೆ ಸಿದ್ಧಾಂತ ಮುಖ್ಯವಾಗಿರಬೇಕು. ಆದರೆ, ಇಂದು ಕೆಲ ಕಾರ್ಯಕರ್ತರು, ಶಾಸಕರ, ಸಚಿವರ ಹಿಂಬಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶೇಕಡ 25ಕ್ಕೂ ಹೆಚ್ಚು ಕ್ರಿಮಿನಲ್ ಶಾಸಕರನ್ನು ನಾವು ಆಯ್ಕೆ ಮಾಡಿದ್ದೇವೆ. ಇದು ಪ್ರತಿಯೊಬ್ಬರು ತಲೆತಗ್ಗಿಸುವ ವಿಚಾರವಾಗಿದ್ದು, ಸಾಮಾಜಿಕ ಪ್ರಜ್ಞೆ ಜನರಲ್ಲಿ ಮೂಡಿಸುವಲ್ಲಿ ನಾವೆಲ್ಲಾ ಸೋತಿದ್ದೇವೆ.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News