ಉಡುಪಿ ಜಿಲ್ಲೆಯಲ್ಲಿ ‘ಫರ್ನಿಚರ್ ಹಬ್’ ಸ್ಥಾಪಿಸಲು ಶಾಸಕ ರಘುಪತಿ ಭಟ್ ಒತ್ತಾಯ

Update: 2018-07-12 12:30 GMT

ಬೆಂಗಳೂರು, ಜು. 12: ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೀಠೋಪಕರಣ ಉತ್ಪಾದನಾ ಘಟಕವನ್ನು (ಫರ್ನಿಚರ್ ಹಬ್) ಸ್ಥಾಪಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಬಿಜೆಪಿ ಸದಸ್ಯ ರಘುಪತಿ ಭಟ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಫರ್ನಿಚರ್ ಹಬ್ ಸ್ಥಾಪಿಸಲು ಎರಡೂ ಜಿಲ್ಲೆಗಳಲ್ಲಿಯೂ ವಿಫುಲವಾದ ಅವಕಾಶಗಳಿದ್ದು, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸಾಧ್ಯ. ಅಲ್ಲದೆ, ಬಂದರು ಇರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆ ಒಳಗೊಂಡಂತೆ ಆ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ವಿಶೇಷ ಆಸ್ಥೆ ವಹಿಸಬೇಕು. ಕರಾವಳಿಯ ಸಮುದ್ರ ತೀರ ಪ್ರದೇಶ ಸೇರಿದಂತೆ ಆ ಭಾಗದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ದೇವಸ್ಥಾನಗಳಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದರು.

ಮೀನುಗಾರರಿಗೆ ನೆರವು ನೀಡಿ: ನಾಡದೋಣಿ ಮೀನುಗಾರರಿಗೆ ಆಹಾರ ಇಲಾಖೆಯಿಂದಲೇ ಸೀಮೆಎಣ್ಣೆ ನೀಡಬೇಕು. ಮೀನುಗಾರರಿಗೆ ಡೀಸೆಲ್ ಮೇಲಿನ ತೆರಿಗೆ ವಿನಾಯಿತಿ ನೀಡಬೇಕು. ವಸತಿ ಯೋಜನೆಯಡಿ ಮೀನುಗಾರರಿಗೆ ಆಶ್ರಯ ಮನೆ ನೀಡಿದರೆ ತಾಂತ್ರಿಕ ತೊಂದರೆಯಾಗುತ್ತಿದ್ದು, ಇದನ್ನು ಪರಿಷ್ಕರಿಸಬೇಕೆಂದು ಅವರು ಆಗ್ರಹಿಸಿದರು.

ಶೂನ್ಯ ಬಡ್ಡಿ ದರದಲ್ಲಿ ಸಾಲ: ಮೀನುಗಾರರ ಮಹಿಳೆಯರಿಗೆ 1ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ ಅವರು, ಉಡುಪಿಯಲ್ಲಿನ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆ ಉಸ್ತುವಾರಿ ಸಮಿತಿಗೆ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ನೇಮಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಆಸ್ಪತ್ರೆ ಉಸ್ತುವಾರಿ ಸಮಿತಿಯಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ವೈದ್ಯಾಧಿಕಾರಿಗಳಿದ್ದು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆ’ಯನ್ನು ಖಾಸಗಿಯವರಿಗೆ ನೀಡಿಲ್ಲ. ಖಾಸಗಿ ವ್ಯಕ್ತಿ ನಮಗೆ ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದು, ಅದೇ ಸ್ಥಳದಲ್ಲೆ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದ್ದು, ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.  ಬಡವರಿಗೆ ಉಚಿತ ಸೇವೆ ಒದಗಿಸುವ ವೇಳೆ ಇದು ಖಾಸಗಿ ಆಸ್ಪತ್ರೆಗಳ ಆಟ ಅಷ್ಟೇ. ನಮ್ಮ ರಕ್ತದಲ್ಲಿ ಉಸಿರಿರುವವರೆಗೂ ಖಾಸಗಿಯವರಿಗೆ ನೀಡಲು ಬಿಡುವುದಿಲ್ಲ’
-ಕೆ.ಆರ್.ರಮೇಶ್‌ ಕುಮಾರ್ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News