ರಾಜ್ಯದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಬಿಡುಗಡೆ ಕೋರಿದ 2,574 ಜೀತದಾಳುಗಳು!

Update: 2018-07-13 14:04 GMT

ಬೆಂಗಳೂರು, ಜು.12: ಉಳ್ಳವರ ಜಮೀನಿನಲ್ಲಿ ಜೀತದಾಳುಗಳಾಗಿ ದುಡಿಯುವ ಅನಿಷ್ಟ ಪದ್ಧತಿ ಈಗಲೂ ಜೀವಂತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿಯೇ 13 ಜೀತದಾಳುಗಳು ಸೇರಿದಂತೆ ರಾಜ್ಯಾದೆಲ್ಲೆಡೆ 2,574ಕ್ಕೂ ಅಧಿಕ ಮಂದಿ ಜೀತ ಪದ್ಧತಿಯಿಂದ ಮುಕ್ತಿ ಕಾಣಲು ಕಾಯುತ್ತಿದ್ದಾರೆ.

ಈಗಾಗಲೇ ಸಾವಿರಾರು ಜೀತದಾಳುಗಳು, ತಮಗೆ ಬಿಡುಗಡೆ ಪತ್ರ ದೊರಕಿಸಿಕೊಡುವ ಜೊತೆಗೆ, ಪುನರ್ವಸತಿ ಕಲ್ಪಿಸುವಂತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ವರದಿಯನ್ನು ಜೀತ ವಿಮುಕ್ತ ಕರ್ನಾಟಕ ಹೊರ ತಂದಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಜೀತ ಪದ್ಧತಿ ಜೀವಂತವಾಗಿರುವುದು ಮಾತ್ರವಲ್ಲದೆ, ಇದುವರೆಗೂ ಜೀತದಾಳುಗಳಿಗೆ ಪರಿಹಾರ, ಮಾಸಾಶನ ದೊರೆತಿಲ್ಲ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, 2010ನೇ ಸಾಲಿನಿಂದ 2016ರವರೆಗಿನ ಸಮೀಕ್ಷೆಯಲ್ಲಿ ಜೀತಪದ್ಧತಿಯಿಂದ ಬಿಡುಗಡೆ ದೊರೆಯದ 15 ಸಾವಿರಕ್ಕೂ ಹೆಚ್ಚು ಜೀತದಾಳುಗಳಿದ್ದಾರೆಂದು ಜೈವಿಕ ಸರ್ವೇ ಮಾಡಿದೆ.

ಹತ್ತು ಹಲವು ವರ್ಷಗಳಿಂದ ಸಾವಿರಾರು ಜೀತದಾಳು ಗಳಿಗೆ ಈ ಜೀತ ಪದ್ಧತಿಯಿಂದ ವಿಮುಕ್ತಿಗೊಳ್ಳುವ ಕನಸು ನನಸಾಗುತ್ತಿಲ್ಲ. ರಾಜ್ಯ ಸರಕಾರವೂ ತಮಗೆ ಬಿಡುಗಡೆ ಪತ್ರ, ಪುನರ್ವಸತಿ ಕಲ್ಪಿಸಿದರೆ ನೆಮ್ಮದಿಯ ಜೀವನ ನಡೆಸಬಹುದೆಂದು ವಿಶ್ವಾಸವನ್ನಿಟ್ಟುಕೊಂಡಿದ್ದಾರೆ. ಆದರೆ, ಜಿಲ್ಲೆಗಳ ಕೆಲ ಉಪವಿಭಾಗಾಧಿಕಾರಿಗಳ ನಿರ್ಲಕ್ಷದಿಂದ ತಡೆ ಉಂಟಾಗುತ್ತಿರುವ ಮಾತುಗಳು ಕೇಳಿಬರುತ್ತಿವೆ.

ಜೀತದಾಳುಗಳು!

ಎಲ್ಲಿ-ಎಷ್ಟು?:  ಜೀತ ಪದ್ಧತಿಯಿಂದ ಮುಕ್ತಿ ನೀಡುವಂತೆ 2013ರಿಂದ ಪ್ರಸ್ತುತ ಸಾಲಿನ ಜೂನ್ ತಿಂಗಳವರೆಗೂ ರಾಜ್ಯದೆಲ್ಲೆಡೆ, ಜೀತದಾಳುಗಳು ಬಿಡುಗಡೆ ಹಾಗೂ ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿ, ತಮ್ಮ ಬೇಡಿಕೆಗಳಿಗಾಗಿ ಆಗ್ರಹಿಸುತ್ತಿದ್ದಾರೆ.

ರಾಯಚೂರು(ಮಾನ್ವಿ)-43, ರಾಯಚೂರು (ದೇವದುರ್ಗ)-7, ಚಾಮರಾಜನಗರ (ಎಳಂದೂರು)-42, ಚಿಕ್ಕಮಗಳೂರು (ಕಡೂರು)-2, ಧಾರವಾಡ (ಕುಂದಗೋಳ) -17, ಚಿಕ್ಕಬಳ್ಳಾಪುರ(ಶಿಡ್ಲಘಟ್ಟ)-840, ಗೌರಿಬಿದನೂರು- 414, ಬಾಗೇಪಲ್ಲಿ-444, ಗುಡಿಬಂಡೆ-131, ಚಾಮರಾಜನಗರ(ಗುಂಡ್ಲುಪೇಟೆ) -47, ರಾಮನಗರ (ಮಾಗಡಿ)-38, ಶಹಾಪುರ-20, ಕಲಬುರಗಿ (ಚಿತ್ತಾಪುರ)-23, ಬೆಳಗಾವಿ (ರಾಮದುರ್ಗ)-150 ಜೀತದಾಳುಗಳು ಬಿಡುಗಡೆಗೆ ಅರ್ಜಿ ಸಲ್ಲಿಸಿರುವುದಾಗಿ ವರದಿ ಹೇಳಿದೆ.

2012ರಿಂದ 2016ರ ವರೆಗೆ 14,217, 2017ನೇ ಸಾಲಿನಲ್ಲಿ 1,099 ಹಾಗೂ ಪ್ರಸ್ತುತ ಸಾಲಿನಲ್ಲಿ 356 ಜೀತದಾಳುಗಳು ಬಿಡುಗಡೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 2,035 ಮಂದಿಗೆ ಮಾತ್ರ ಬಿಡುಗಡೆ ಪತ್ರ ದೊರೆತಿದೆ. ಕಾನೂನಿನ ಪ್ರಕಾರ ಜೀತದಾಳುಗಳ ವಿಚಾರಣೆಯನ್ನು ಜಿಲ್ಲಾಧಿಕಾರಿಗಳು ಅಥವಾ ಉಪವಿಭಾಗಾಧಿಕಾರಿಗಳು ಮಾತ್ರ ಮಾಡಬೇಕು. ಅವರಿಗೆ ಸಂಪೂರ್ಣ ನ್ಯಾಯಿಕ ದಂಡಾಧಿಕಾರಿಗಳ ಅಧಿಕಾರಗಳನ್ನು ಕೊಡಲಾಗಿದೆ. ಪೊಲೀಸರ ಮೂಲಕ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಬೇಕೆಂದಿಲ್ಲ. ಜೀತದಾಳುಗಳ ತನಿಖೆಯನ್ನು ಸಾಮಾನ್ಯ ಕೋರ್ಟುಗಳಲ್ಲಿ ಮಾಡಲಿಕ್ಕಿಲ್ಲ ಎಂದು ವರದಿ ತಿಳಿಸಿದೆ. ಕಾನೂನಿನ ಪ್ರಕಾರ ತಪ್ಪಿತಸ್ಥ ಮಾಲಕರಿಗೆ 3 ವರ್ಷ ಜೈಲು ಮತ್ತು 2 ಸಾವಿರ ರೂ ದಂಡ ಶಿಕ್ಷೆ ವಿಧಿಸಬಹುದಾಗಿದೆ. ಹೀಗಿದ್ದರೂ, ಜೀತ ಪದ್ಧತಿ ಜೀವಂತವಾಗಿರುವುದು ಶೋಚನೀಯ ಸಂಗತಿ.

ವಿಶೇಷ ಪರಿಸ್ಥಿತಿಗಳಲ್ಲಿ ಪರಿಹಾರದ ಹಣ 2 ಲಕ್ಷ ರೂಪಾಯಿವರೆಗೂ ವಿಸ್ತರಿಸಬಹುದು. ಅಂಗವಿಕಲರು, ಲೈಂಗಿಕ ಶೋಷಣೆಗೊಳಗಾದ ಮಕ್ಕಳು, ಮಹಿಳೆಯರು, ತೃತೀಯ ಲಿಂಗಿಗಳಿಗೆ 3 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಬಹುದಾಗಿದೆ. ಪುರುಷ ಜೀತ ಕಾರ್ಮಿಕನಿಗೆ 1 ಲಕ್ಷ ರೂಪಾಯಿವರೆಗೆ ಪರಿಹಾರ ದೊರೆಯಲಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪವಿಭಾಗಾಧಿಕಾರಿಗಳು ಪುನರ್ವಸತಿ ಕಲ್ಪಿಸಲು ಮುಂದಾಗುತ್ತಿಲ್ಲ ಎನ್ನುವ ಆರೋಪ ದಟ್ಟವಾಗಿದೆ.

ಅಧಿಕಾರಿಗಳ ನಿರ್ಲಕ್ಷ?

ಸರಕಾರ 2012ರಲ್ಲಿ ನೀಡಿದ ಪ್ರಶ್ನೋತ್ತರಗಳಿಂದ ಲಿಖಿತ ಉತ್ತರ ಪಡೆದು ಜೀತದಾಳುಗಳೆಂದು ದೃಢೀಕರಿಸಿ ವರದಿ ಕಳುಹಿಸಿದರೂ, ಜಿಲ್ಲಾಧಿಕಾರಿಗಳು ಅವರನ್ನು ಬಿಡುಗಡೆಗೊಳಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೀತ ವಿಮುಕ್ತ ಕರ್ನಾಟಕ ಹೇಳಿದೆ.

ಹೊಸ ಕಾನೂನು

ಕೇಂದ್ರ ಸರಕಾರ 1976ರ ಜೀತ ಕಾರ್ಮಿಕ ಪದ್ಧತಿ (ನಿಷೇಧ) ಕಾಯ್ದೆಗೆ ತಿದ್ದುಪಡಿ ತಂದಿದ್ದು, ಜೀತ ಕಾರ್ಮಿಕರ ಪುನರ್ವಸತಿ ಯೋಜನೆಯನ್ನು ನವೀಕರಿಸಿದೆ. ಜೀತ ಕಾರ್ಮಿಕರಿಗೆ ನೀಡುತ್ತಿದ್ದ ಪರಿಹಾರದ ಹಣವನ್ನು 20ರಿಂದ 50 ಸಾವಿರ ರೂಪಾಯಿಗೆ ಏರಿಸಲಾಗಿದೆ.

ಕೆಲ ಜಿಲ್ಲೆಗಳ ಉಪವಿಭಾಗಾಧಿ ಕಾರಿಗಳು, ಜೀತದಾಳುಗಳ ವಿಚಾರಣೆ ಮಾಡುವಾಗ ಬಿಡುಗಡೆ ಪತ್ರ ಕೊಡದೆ, ಅವರ ಮಾಲಕರನ್ನು ಕೋರ್ಟ್‌ನಲ್ಲಿ ವಿಚಾರಣೆ ನಡೆಸುವಂತೆ ಪೊಲೀಸರಿಂದ ನೋಟಿಸ್ ಕಳುಹಿಸುತ್ತಾರೆ. ನೋಟಿಸ್ ನೋಡಿದ ಮಾಲಕರು ಜೀತದಾಳುಗಳ ಮೇಲೆ ಒತ್ತಡ ತಂದು ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಹಿಂಸೆ ನೀಡುತ್ತಾರೆ.

ಕಿರಣ್ ಕಮಲ ಪ್ರಸಾದ್, ಸಂಚಾಲಕ, ಜೀತ ವಿಮುಕ್ತ ಕರ್ನಾಟ

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News