53 ಗಂಟೆ ನಡೆದ ವಿಧಾನಸಭೆ ಕಲಾಪ: ಐದು ವಿಧೇಯಕಗಳ ಅಂಗೀಕಾರ

Update: 2018-07-13 12:53 GMT

ಬೆಂಗಳೂರು, ಜು.13: 15ನೆ ವಿಧಾನಸಭೆಯ ಮೊದಲನೆ ಅಧಿವೇಶನದ ಎರಡನೆ ಮುಂದುವರೆದ ಉಪವೇಶನವು ಜು.2 ರಿಂದ 13ರವರೆಗೆ 12 ದಿನಗಳ ಕಾಲ ಬೆಂಗಳೂರಿನ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಸಭೆ ಸೇರಿ ಒಟ್ಟಾರೆ 53 ಗಂಟೆ 5 ನಿಮಿಷಗಳ ಕಾಲ ಕಾರ್ಯಕಲಾಪಗಳನ್ನು ನಡೆಸಲಾಗಿದೆ.

ಜು.2 ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ್ದು, ವಂದನಾ ನಿರ್ಣಯದ ಪ್ರಸ್ತಾವದ ಮೇಲೆ 16 ಗಂಟೆ 26 ನಿಮಿಷಗಳ ಕಾಲ ಚರ್ಚೆಯಾಗಿದೆ. 27 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಜು.9ರಂದು ಮುಖ್ಯಮಂತ್ರಿ ಚರ್ಚೆಗೆ ಉತ್ತರಿಸಿದ ನಂತರ ವಂದನಾ ನಿರ್ಣಯದ ಪ್ರಸ್ತಾವನೆಯು ಅಂಗೀಕೃತವಾಗಿದೆ.

ಜು.5ರಂದು ಮುಖ್ಯಮಂತ್ರಿ 2018-19ನೆ ಸಾಲಿನ ಆಯವ್ಯಯ ಅಂದಾಜುಗಳನ್ನು ಸದನದಲ್ಲಿ ಮಂಡಿಸಿದ್ದು, ಆಯವ್ಯಯದ ಅಂದಾಜುಗಳ ಮೇಲೆ 16 ಗಂಟೆ 16 ನಿಮಿಷಗಳ ಕಾಲ ಚರ್ಚೆಯಾಗಿದ್ದು, 32 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಜು.12ರಂದು ಮುಖ್ಯಮಂತ್ರಿ ಚರ್ಚೆಗೆ ಉತ್ತರವನ್ನು ನೀಡಿದ್ದು, ಸದನವು ಅದೇ ದಿನ 2018-19ರ ಆಯವ್ಯಯ ಅಂದಾಜುಗಳಿಗೆ ಅನುಮೋದನೆ ನೀಡಿದೆ.

ಈ ಅಧಿವೇಶನದಲ್ಲಿ ಇತ್ತೀಚೆಗೆ ನಿಧನ ಹೊಂದಿದ ವಿಧಾನಸಭೆಯ ಹಾಲಿ ಸದಸ್ಯರಾದ ಸಿದ್ದು ಬಿ.ನ್ಯಾಮಗೌಡ, ಮಾಜಿ ವಿಧಾನಸಭಾ ಸದಸ್ಯರಾದ ವೈ.ಎನ್.ರುದ್ರೇಶ್‌ಗೌಡ, ಬಿ.ಎನ್.ವಿಜಯಕುಮಾರ್, ಎಚ್.ಬಿ.ದ್ಯಾವೀರಪ್ಪ, ಮಹಾದೇವಪ್ಪ ಶಿವಬಸಪ್ಪ ಪಟ್ಟಣ, ಬಿ.ಮುನಿಯಪ್ಪ, ಸದಾಶಿವಪ್ಪ ಪಾಟೀಲ್, ಕೆ.ಎಚ್.ಹನುಮೇಗೌಡ, ಡಾ.ವೈ.ಸಿ.ವಿಶ್ವನಾಥ್, ಎಚ್.ಗಂಗಾಧರನ್, ಬಿ.ಎಸ್.ಪಾಟೀಲ್ ಸಾಸನೂರ ಮತ್ತು ಬಿ.ಎ.ಮೊಹಿದಿನ್ ನಿಧನಕ್ಕೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗಿದೆ.

ಈ ಅಧಿವೇಶನದಲ್ಲಿ 14ನೆ ವಿಧಾನಸಭೆಯ ಅಂದಾಜುಗಳ ಸಮಿತಿಯ 7ನೆ ವರದಿಯನ್ನು ಹಾಗೂ ಅಧೀನ ಶಾಸನ ರಚನಾ ಸಮಿತಿಯ 46ನೆ ವರದಿಯನ್ನು ಮಂಡಿಸಲಾಗಿದೆ. ಪ್ರಸ್ತುತ ಅಧಿವೇಶನದಲ್ಲಿ 4 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ.

ರಾಜ್ಯ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 60ರ ಮೇರೆಗೆ 1 ನಿಲುವಳಿ ಸೂಚನೆಯನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಪ್ರಾಸ್ತಾವಿಕವಾಗಿ ಚರ್ಚಿಸಲಾಗಿದೆ. ನಿಯಮ 69ರಲ್ಲಿ 13 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 3 ಸೂಚನೆಗಳ ಮೇಲೆ ಚರ್ಚೆಯಾಗಿ, ಉತ್ತರಿಸಲಾಗಿದೆ ಹಾಗೂ 3 ಸೂಚನೆಗಳ ಉತ್ತರಗಳನ್ನು ಮಂಡಿಸಲಾಗಿದೆ.

ಶೂನ್ಯವೇಳೆಯಲ್ಲಿ 8 ಸೂಚನೆಗಳ ಮೇಲೆ ಸದನದಲ್ಲಿ ಚರ್ಚಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 747 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 715 ಪ್ರಶ್ನೆಗಳನ್ನು ಅಂಗೀಕರಿಸಲಾಗಿದೆ. ಸದನದಲ್ಲಿ ಉತ್ತರಿಸುವ 60 ಪ್ರಶ್ನೆಗಳ ಪೈಕಿ 27 ಪ್ರಶ್ನೆಗಳನ್ನು ಚರ್ಚಿಸಲಾಗಿದೆ. 29 ಪ್ರಶ್ನೆಗಳ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 646 ಪ್ರಶ್ನೆಗಳ ಪೈಕಿ 537 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ.

ನಿಯಮ 73ರ ಮೇರೆಗೆ ಸ್ವೀಕರಿಸಲಾಗಿರುವ ಒಟ್ಟು 123 ಸೂಚನಾ ಪತ್ರಗಳ ಪೈಕಿ 73 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. 10 ಸೂಚನೆಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದೆ ಹಾಗೂ 28 ಸೂಚನೆಗಳ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. ನಿಯಮ 351ರಡಿಯಲ್ಲಿ ಒಟ್ಟು 58 ಸೂಚನೆಗಳು ಅಂಗೀಕೃತಗೊಂಡಿದ್ದು, 32 ಸೂಚನೆಗಳಿಗೆ ಸರಕಾರದಿಂದ ಉತ್ತರಗಳನ್ನು ಸ್ವೀಕರಿಸಲಾಗಿದೆ.

ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಮೊದಲನೆ ಪಟ್ಟಿಯಿಂದ 6 ಅಧಿಸೂಚನೆಗಳನ್ನು 2ನೇ ಮತ್ತು 3ನೇ ಪಟ್ಟಿಯ ಮೂಲಕ 46 ವಾರ್ಷಿಕ ವರದಿಗಳು, 42 ಲೆಕ್ಕಪರಿಶೋಧನೆ ವರದಿಗಳು, 4ನೇ ಹಣಕಾಸು ಆಯೋಗದ ವರದಿ, ವಿವರಣಾತ್ಮಕ ಟಿಪ್ಪಣಿ ಹಾಗೂ ಲೆಕ್ಕಪತ್ರ ವರದಿಯನ್ನು ಈ ಅಧಿವೇಶನದಲ್ಲಿ ಮಂಡಿಸಲಾಗಿದೆ.

ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕಗಳು ಸೇರಿದಂತೆ, ಒಟ್ಟು 5 ವಿಧೇಯಕಗಳನ್ನು ಮಂಡಿಸಲಾಗಿದ್ದು, ಎಲ್ಲ ವಿಧೇಯಕಗಳು ಅಂಗೀಕಾರಗೊಂಡಿವೆ. ಭಾರತದ ಸಂವಿಧಾನದ ಅನುಚ್ಛೇದ 151(2)ನೇ ಮೇರೆಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 31ನೇ ಮಾರ್ಚ್, 2017ಕ್ಕೆ ಕೊನೆಗೊಂಡ ವರ್ಷಕ್ಕೆ ನೀಡಿರುವ ರಾಜ್ಯ ಹಣಕಾಸಿನ ವ್ಯವಹಾರಗಳ ಮೇಲಿನ ವರದಿ ಹಾಗೂ ಸಾಮಾನ್ಯ ಮತ್ತು ಸಾಮಾಜಿಕ ವಲಯದ ಮೇಲಿನ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News