ನೀರವ್ ಮೋದಿ ಸಂಸ್ಥೆಯಿಂದ ಚಿನ್ನಾಭರಣ ಖರೀದಿಸಿದ್ದ 50 ಶ್ರೀಮಂತರ ಮೇಲೆ ಐಟಿ ಕಣ್ಣು

Update: 2018-07-14 07:49 GMT

ಹೊಸದಿಲ್ಲಿ, ಜು. 14: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ತಲೆಮರೆಸಿಕೊಂಡಿರುವ ವಜ್ರೋದ್ಯಮಿ ನೀರವ್ ಮೋದಿಯ ಸಂಸ್ಥೆಗಳಿಂದ ದುಬಾರಿ ಚಿನ್ನಾಭರಣ ಖರೀದಿಸಿದ್ದ 50ಕ್ಕೂ ಹೆಚ್ಚು ಮಂದಿ ಶ್ರೀಮಂತರ ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಮರು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ.

ನೀರವ್ ಮೋದಿ ಸಂಸ್ಥೆಗಳಿಂದ ಚಿನ್ನಾಭರಣ ಖರೀದಿಸಿದ ಹಲವರಿಗೆ ಇಲಾಖೆ ನೋಟಿಸ್ ಕಳುಹಿಸಿ ಚಿನ್ನಾಭರಣ ಖರೀದಿಸಲು ಅವರಿಗಿದ್ದ ಆದಾಯ ಮೂಲ ಯಾವುದು ಎಂಬ ಬಗ್ಗೆ ವಿವರಣೆ ಕೇಳಿದ್ದರೂ ಯಾರೊಬ್ಬರೂ ನೀರವ್ ಮೋದಿಗೆ ನಗದು ಪಾವತಿಸಿದ್ದನ್ನು ನಿರಾಕರಿಸಿದ್ದರಿಂದ ಇಲಾಖೆ ಮೇಲಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಈ ಶ್ರೀಮಂತ ಕುಳಗಳು ತಾವು ಖರೀದಿಸಿದ್ದ ಅತ್ಯಂತ ಬೆಲೆಬಾಳುವ ಚಿನ್ನಾಭರಣಗಳಿಗೆ ಚೆಕ್ ಅಥವಾ ಕಾರ್ಡ್ ಮೂಲಕ ಭಾಗಶಃ ಪಾವತಿಸಿ ಉಳಿದ ಹಣವನ್ನು ನಗದು ರೂಪದಲ್ಲಿ ಪಾವತಿಸಿದ್ದಾರೆಂಬ ಮಾಹಿತಿ ಇಲಾಖೆಗೆ ದೊರಕಿದೆ.

ಇದೇ ಕಾರಣದಿಂದ ಆರ್ಥಿಕ ವರ್ಷ 2014-15ರಿಂದ ಈ 50ಕ್ಕೂ ಅಧಿಕ ಮಂದಿಯ ಐಟಿ ರಿಟರ್ನ್ಸ್ ಮರುಪರಿಶೀಲಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ಯಾವುದಾದರೂ ಅವ್ಯವಹಾರ ಪತ್ತೆಯಾದರೆ ಸಂಬಂಧಿತರು ತೆರಿಗೆ ವಂಚನೆ ಪ್ರಕರಣ ಎದುರಿಸಬೇಕಾಗಿದೆ. 

ಇಲಾಖೆ ಇತ್ತೀಚೆಗೆ ರೆವಾರಿ ಮೂಲದ ಆಸ್ಪತ್ರೆಯೊಂದರ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಈ ಆಸ್ಪತ್ರೆ ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಅವರ ಕುಟುಂಬದ ಸಂಬಂಧಿಕರದ್ದೆನ್ನಲಾಗಿದೆ. ಈ ಆಸ್ಪತ್ರೆಯ ಮಾಲಕರು ನೀರವ್ ಮೋದಿ ಸಂಸ್ಥೆಯಿಂದ ಚಿನ್ನಾಭರಣ ಖರೀದಿಸಿ ಭಾಗಶಃ ಹಣವನ್ನು ನಗದು ಹಾಗೂ ಚೆಕ್ ಮೂಲಕ ಪಾವತಿಸಿದ್ದಾರೆಂದು ತಿಳಿದು ಬಂದಿದೆ.

ಈಗಾಗಲೇ ನೀರವ್ ಮೋದಿ ಮತ್ತಿತರರ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ತೆರಿಗೆ ವಂಚನೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News