ರಾತ್ರೋರಾತ್ರಿ ನೋಟು ರದ್ದತಿ ಸಾಧ್ಯವಾದರೆ ರಾಮಮಂದಿರ ಏಕೆ ಸಾಧ್ಯವಿಲ್ಲ: ಉದ್ಧವ್ ಠಾಕ್ರೆ ಪ್ರಶ್ನೆ

Update: 2018-07-15 08:02 GMT

ಪುಣೆ, ಜು.15: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೋಟು ರದ್ದತಿ ಬಗ್ಗೆ ರಾತ್ರೋರಾತ್ರಿ ನಿರ್ಧಾರ ಕೈಗೊಳ್ಳುವುದಾದರೆ, ರಾಮಮಂದಿರ ವಿಚಾರದಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ ಮತ್ತು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ಬಗ್ಗೆ ಚುನಾವಣೆಗೆ ಮುನ್ನ ನಿರ್ಧರಿಸಲಾಗುತ್ತದೆ ಎಂದು ಬಿಜೆಪಿ ಭರವಸೆ ನೀಡುತ್ತಿದೆ. ಆದರೆ 2019ರ ಚುನಾವಣೆಯೋ ಅಥವಾ 2050ರ ಚುನಾವಣೆಯೋ ಎಂದು ಠಾಕ್ರೆ ಛೇಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ನೋಟು ರದ್ದತಿ ನಿರ್ಧಾರವನ್ನು ದಿಢೀರನೇ ಬಿಜೆಪಿ ಕೈಗೊಂಡಿತು. ಅಂತೆಯೇ ರಾಮಮಂದಿರ ನಿರ್ಮಾಣಕ್ಕೂ ಕೈಗೊಳ್ಳಿ; ಏಕೆಂದರೆ ನಿಮಗೆ ಬಹುಮತ ಇದೆ" ಎಂದು ಬಿಜೆಪಿಗೆ ಸವಾಲು ಹಾಕಿದರು.

ಇದುವರೆಗೆ ಅಭಿವೃದ್ಧಿ ಬಿಜೆಪಿಯ ಕಾರ್ಯಸೂಚಿಯಾಗಿತ್ತು. ಆದರೆ ಇದೀಗ ರಾಮಮಂದಿರ ವಿವಾದವನ್ನು ಕೈಗೆತ್ತಿಕೊಂಡಿದೆ ಎಂದು ಎನ್‍ಡಿಎ ಮೈತ್ರಿಕೂಟದಲ್ಲಿರುವ ಪಕ್ಷದ ಮುಖಂಡ ಲೇವಡಿ ಮಾಡಿದರು. ಅಂತೆಯೇ ಮಹಾರಾಷ್ಟ್ರ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ಮಾಡಿದ ಅವರು, ಮಹಾರಾಷ್ಟ್ರ ಕೈಗೊಂಡ ಸಾಲ ಮನ್ನಾ ಪ್ರಯೋಜನ ಯಾವ ರೈತರಿಗೂ ದೊರಕಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News