ಬೀದರ್: ಮಕ್ಕಳ ಕಳ್ಳ ಎಂಬ ಶಂಕೆಯಲ್ಲಿ ಟೆಕ್ಕಿಯನ್ನು ಥಳಿಸಿ ಕೊಂದ ಗುಂಪು

Update: 2018-07-15 14:04 GMT

ಬೀದರ್, ಜು. 15: ಮಕ್ಕಳ ಅಪಹರಣದ ವದಂತಿ ನಂಬಿ ಕಾರಿನಲ್ಲಿ ಸಂಬಂಧಿಕರ ಮನೆಗೆ ಊಟಕ್ಕೆ ಬಂದಿದ್ದ ಮೂವರನ್ನು ಗುಂಪೊಂದು ಮಾರಣಾಂತಿಕವಾಗಿ ಥಳಿಸಿದ್ದು, ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಯೋರ್ವ ಸಾವನ್ನಪ್ಪಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ವಾಟ್ಸಾಪ್ ಅಡ್ಮಿನ್ ಸೇರಿದಂತೆ 30 ಮಂದಿಯನ್ನು ಬಂಧಿಸಿದ ಘಟನೆ ಇಲ್ಲಿನ ಕಮಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲೆಯ ಕಮಲನಗರ ತಾಲೂಕಿನ ಮುರ್ಕಿ ಗ್ರಾಮದಲ್ಲಿ ನಡೆದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹೈದರಾಬಾದ್ ಮೂಲದ ಸಮೀರ್ ಅಝೀಂ (24) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವವರನ್ನು ಸಲ್ಮಾನ್ ಮತ್ತು ಸಲೀಂ ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಬಂಧಿಕರೊಬ್ಬರ ಮನೆಗೆ ಹೈದರಾಬಾದ್‌ನಿಂದ ಊಟಕ್ಕೆಂದು ಸಮೀರ್ ಸೇರಿ ಮೂರು ಮಂದಿ ಕಾರಿನಲ್ಲಿ ಔರಾದ್ ತಾಲೂಕಿನ ಹಂದಿಕೇರಾ ಗ್ರಾಮದ ಸ್ನೇಹಿತ ಬಶೀರ್ ಎಂಬಾತನ ಅಣ್ಣನ ಮನೆಗೆ ಬಂದಿದ್ದರು. ಊಟ ಮುಗಿಸಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಇಲ್ಲಿ ಹಂದಿಕೇರಾ ಗ್ರಾಮದ ವೃತ್ತದಲ್ಲಿ ವಿದ್ಯಾರ್ಥಿಗಳಿಗೆ ಚಾಕೋಲೇಟ್ ನೀಡಲು ಮುಂದಾಗಿದ್ದಾರೆ. ಮೂವರ ಪೈಕಿ ಸಲೀಂ ಎಂಬವರು ಕತಾರ್‌ನಲ್ಲಿ ಪೊಲೀಸ್ ಸೇವೆಯಲ್ಲಿದ್ದು, ಬರುವಾಗ ಅಲ್ಲಿಂದಲೇ ಚಾಕೊಲೇಟ್ ತಂದಿದ್ದು, ಮಕ್ಕಳಿಗೆ ನೀಡುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ.
ಈ ಸಂದರ್ಭದಲಿ ಜಗಳ ಉಂಟಾಗಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ನಡೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಆ ಬಳಿಕ ಕಾರಿನಲ್ಲಿ ಮೂವರು ‘ಮುರ್ಕಿ’ ಕಡೆಗೆ ಹೊರಟಿದ್ದಾರೆ. ಕೆಲವರು ಈ ಗಲಾಟೆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು, ಮುರ್ಕಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆಂದು ಗೊತ್ತಾಗಿದೆ.

ಕೂಡಲೇ ಗುಂಪು ಸೇರಿದ ಮುರ್ಕಿ ಗ್ರಾಮಸ್ಥರು ಕಾರನ್ನು ಅಡ್ಡಗಟ್ಟಲು ಮುಂದಾಗಿದ್ದು, ಕಾರು ಬೈಕ್‌ಗೆ ಗುದ್ದಿದೆ. ಇದರ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಬೈಕ್ ಸವಾರ ಉಮೇಶ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು 3 ಮಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ಸುದ್ಧಿ ತಿಳಿದು ಗ್ರಾಮಕ್ಕೆ ಧಾವಿಸಿದ ಪೊಲೀಸರು ಗುಂಪು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಲು ಲಘುಲಾಠಿ ಪ್ರಹಾರವನ್ನೂ ನಡೆಸಿದ್ದು, ಮೂವತ್ತು ಮಂದಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಔರಾದ್ ಶಾಸಕರ ಪ್ರಭು ಚೌವ್ಹಾಣ್, ಎಸ್ಪಿ ಡಿ. ದೇವರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಿದ್ದಾರೆ.

‘ಮಕ್ಕಳ ಅಪಹರಣಕಾರರು ಬಂದಿದ್ದಾರೆಂಬ ವದಂತಿಗಳಿಗೆ ಜಿಲ್ಲೆಯ ಜನತೆ ಕಿವಿಗೊಡಬಾರದು. ಕಿಡಿಗೇಡಿಗಳು ಹಬ್ಬಿಸುವ ವದಂತಿಯು ಸಮಾಜದಲ್ಲಿ ಆಶಾಂತಿಗೆ ಕಾರಣವಾಗುತ್ತದೆ. ಜನರಲ್ಲಿ ಅಸುರಕ್ಷಿತ ಮನೋಭಾವ ಮೂಡಿಸುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು’
-ಡಾ.ಎಚ್.ಆರ್.ಮಹಾದೇವ್ ಜಿಲ್ಲಾಧಿಕಾರಿ,ಬೀದರ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News