ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ಯುವತಿಯ ಮನೆಗೆ ನೋಟಿಸ್ ಹಚ್ಚಿದ ಪೊಲೀಸರು

Update: 2018-07-15 08:52 GMT

ಸೂರತ್, ಜು.15: ಬಿಜೆಪಿ ಮುಖಂಡನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಯುವತಿಯ ಮನೆಯ ಹೊರಗೆ ಪೊಲೀಸರು ನೋಟಿಸ್ ಹಚ್ಚಿ, ಆಕೆಯ ಗುರುತು ಬಹಿರಂಗಪಡಿಸಿದ ಘಟನೆ ವರದಿಯಾಗಿದೆ. ತಂದೆಯ ಜತೆ ಠಾಣೆಗೆ ಹಾಜರಾಗುವಂತೆ ಅತ್ಯಾಚಾರ ಸಂತ್ರಸ್ತೆಗೆ ಪೊಲೀಸರು ನೀಡಿರುವ ನೋಟಿಸ್‍ ನಲ್ಲಿ ತಿಳಿಸಲಾಗಿದೆ ಎಂದು "ಇಂಡಿಯನ್ ಎಕ್ಸ್‍ಪ್ರೆಸ್" ವರದಿ ಮಾಡಿದೆ.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಜಯಂತಿ ಭಾನುಶಾಲಿ ವಿರುದ್ಧ 21 ವರ್ಷ ವಯಸ್ಸಿನ ಮಹಿಳೆಯೊಬ್ಬರು ದೂರು ನೀಡಿ, ಕಳೆದ ನವೆಂಬರ್ ತಿಂಗಳಿನಿಂದೀಚೆಗೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾಗಿ ದೂರು ನೀಡಿದ್ದರು. ಪ್ರಸಿದ್ಧ ಫ್ಯಾಷನ್ ಡಿಸೈನಿಂಗ್ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ಆಮಿಷವೊಡ್ಡಿ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿ ದೂರು ನೀಡಿದ್ದರು. ಆದರೆ ಆರೋಪವನ್ನು ಭಾನುಶಾಲಿ ನಿರಾಕರಿಸಿದ್ದು, ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಹಲವು ಬಾರಿ ಆಕೆಯನ್ನು ಹುಡುಕುವ ಪ್ರಯತ್ನ ಮಾಡಿದರೂ ವಿಫಲವಾದ ಹಿನ್ನೆಲೆಯಲ್ಲಿ ಆಕೆಯ ಮನೆ ಮುಂದೆ ಕಪೋದರ ಇನ್‍ಸ್ಪೆಕ್ಟರ್ ಆರ್.ಎಲ್.ದವೆ ಅವರ ಸಹಿ ಇರುವ ನೋಟಿಸ್ ಹಚ್ಚಲಾಗಿದೆ. ಮಹಿಳೆಯ ಸಂಬಂಧಿಕರೊಬ್ಬರ ಮೊಬೈಲ್ ನಂಬರ್ ದೊರಕಿದೆ. ಆದರೆ ಇದು ಸ್ವಿಚ್‍ಆಫ್ ಇದೆ ಎಂದು ದವೆ ವಿವರಿಸಿದ್ದಾರೆ.

ದೂರಿನ ಸಂಬಂಧ ಠಾಣೆಯಲ್ಲಿ ಹೇಳಿಕೆ ನೀಡುವ ಸಲುವಾಗಿ ಉಪ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ. ನೋಟಿಸ್‍ನಲ್ಲಿ ಸಂತ್ರಸ್ತೆಯ ತಂದೆಯ ಮೊಬೈಲ್ ಸಂಖ್ಯೆಯನ್ನೂ ನಮೂದಿಸಲಾಗಿದೆ.

ಮಹಿಳೆಯನ್ನು ಹುಡುಕುತ್ತಿರುವ ಪೊಲೀಸರು ನಿಯಮಾವಳಿಗೆ ಅನುಸಾರವಾಗಿಯೇ ಈ ನೋಟಿಸ್ ನೀಡಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. ಮಹಿಳೆ ಭಾನುಶಾಲಿ ವಿರುದ್ಧ ದೂರು ನೀಡಿಲ್ಲ. ಪುರುಷರೊಬ್ಬರು ಈ ಬಗ್ಗೆ ಠಾಣೆಗೆ ಬಂದು ದೂರು ನೀಡಿದ್ದರು ಎನ್ನುವುದು ಪೊಲೀಸರ ಹೇಳಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News