ಹಾಪುರ್ ಹತ್ಯೆ ಪ್ರಕರಣ: ಆದಿತ್ಯನಾಥ್ ಆದೇಶದಂತೆ ಗೋರಕ್ಷಕರನ್ನು ರಕ್ಷಿಸುತ್ತಿರುವ ಪೊಲೀಸರು

Update: 2018-07-15 14:29 GMT

ಲಕ್ನೋ, ಜು.15: ಬಿಜೆಪಿ ಹಾಗೂ ಆದಿತ್ಯನಾಥ್ ಸರ್ಕಾರದ ಅಣತಿಯಂತೆ ಪೊಲೀಸರು ಹಾಪುರ್ ಹತ್ಯೆ ಪ್ರಕರಣವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಜೂನ್ 18ರ ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ  65 ವರ್ಷದ ಸಮೀಯುದ್ದೀನ್ ಆರೋಪಿಸಿರುವುದಾಗಿ indiatoday.in ವರದಿ ಮಾಡಿದೆ.

ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮೀರತ್ ವಲಯದ ಐಜಿಪಿ ರಾಮ್‍ಕುಮಾರ್ ಅವರಿಗೆ ಘಟನೆ ಬಗ್ಗೆ ವಿಸ್ತೃತ ಹೇಳಿಕೆ ಕಳುಹಿಸಿರುವ ಅವರು, ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ಬಗ್ಗೆ ವಿಶ್ವಾಸವಿಲ್ಲ. ಜಾನುವಾರು ವ್ಯಾಪಾರಿ ಖಾಸಿಂ ಹತ್ಯೆ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಘಟನೆ ನಡೆದ ದಿನ ಖಾಸಿಂ ಅವರನ್ನು ರಕ್ಷಿಸಲು ಸಮೀಯುದ್ದೀನ್ ಮುಂದಾದಾಗ ಅವರ ಮೇಲೂ ಹಲ್ಲೆ ನಡೆದಿತ್ತು. ಈ ಹಲ್ಲೆಯಿಂದಾದ ಗಾಯ ಹಾಗೂ ಎರಡೂ ಕೈ, ಬಲಗಾಲು ಮೂಳೆ ಮುರಿತದಿಂದ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಹಾಪುರ್ ಜಿಲ್ಲೆ ಬಜ್ಹೆರಾ ಗ್ರಾಮದಲ್ಲಿ ಗೋರಕ್ಷಕರ ಗುಂಪು ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ ಘಟನೆಯನ್ನು ಅವರು ವಿವರಿಸಿದ್ದಾರೆ.

ಘಟನೆ ನಡೆದಾಗ ಖಾಸಿಂ ಬಳಿ ಯಾವ ಹಸು ಅಥವಾ ಯಾವುದೇ ಪ್ರಾಣಿಯನ್ನು ಕೊಲ್ಲುವ ಕೊಡಲಿ ಅಥವಾ ಆಯುಧ ಇರಲಿಲ್ಲ. ಹಲ್ಲೆಯಿಂದಾಗಿ ತಲೆಯಿಂದ ಹಿಡಿದು ಕಾಲುಬೆರಳಿನ ವರೆಗೆ ರಕ್ತ ಸುರಿದು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಹತ್ತಿರದ ಜಿ.ಎಸ್.ಮೆಡಿಕಲ್ ಕಾಲೇಜಿಗೆ ಪೊಲೀಸರು ಒಯ್ದಾಗ "ಕಾಸಿಂ ಬಹುಶಃ ಸತ್ತಿರಬೇಕು" ಎಂದು ಬೇರೆಯವರು ಹೇಳುತ್ತಿದ್ದರು ಎಂದು ಸಮೀಯುದ್ದೀನ್ ನೆನಪಿಸಿಕೊಂಡರು. ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಿ, ಬೆರಳಚ್ಚು ಪ್ರತಿಯನ್ನು ಕಾಗದದ ಮೇಲೆ ಪಡೆದದ್ದು ಅವರಿಗೆ ಜ್ಞಾಪಕವಿದೆ. ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದ್ದು, ರಾತ್ರಿ 7-8 ಗಂಟೆ ಸುಮಾರಿಗೆ ದೇವನಂದಿ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. 24 ಗಂಟೆ ಬಳಿಕ ಪ್ರಜ್ಞೆ ಬಂತು. ಜುಲೈ 6ರಂದು ದೆಹಲಿಯ ಅಲ್‍ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಹೋದರ ಯಾಸಿನ್ ಹಾಗೂ ಕುಟುಂಬ ಸ್ನೇಹಿತ ದಿನೇಶ್ ಥೋಮರ್ ಅವರೂ ಸುದ್ದಿಸಂಸ್ಥೆ ಜತೆ ಮಾತನಾಡಿ, ಪೊಲೀಸರು ಸಂಜೆ 5.30ರವರೆಗೂ ಗಾಯಾಳು ಎಲ್ಲಿದ್ದಾರೆ ಎಂಬ ವಿಚಾರದಲ್ಲಿ ದಿಕ್ಕು ತಪ್ಪಿಸುತ್ತಿದ್ದರು ಹಾಗೂ ಸುಳ್ಳು ಎಫ್‍ಐಆರ್ ಸಿದ್ಧಪಡಿಸಿ ಸಹಿ ಮಾಡುವಂತೆ ಬಲವಂತ ಮಾಡಿದ್ದರು ಎಂದು ಆಪಾದಿಸಿದ್ದಾರೆ.

"ಪಿಲ್ಖುವಾ ಪೊಲೀಸರ ಮೇಲೆ ನನಗೆ ನಂಬಿಕೆಯಿಲ್ಲ. ಘಟನೆಯ ಪ್ರಮುಖ ಆರೋಪಿ ಯುಧಿಷ್ಟಿರ್ ಸಿಂಗ್ ಗೆ ಜಾಮೀನು ಮಂಜೂರಾಗುವುದನ್ನು ತಡೆಯುವುದರಲ್ಲಿ ಅವರು ವಿಫಲರಾಗಿದ್ದಾರೆ. ನ್ಯಾಯಾಂಗ ತನಿಖೆ ನಡೆಸಬೇಕೆಂದು ನಾನು ಮೀರತ್ ಐಜಿಗೆ ಪತ್ರ ಬರೆದಿದ್ದೇನೆ. ಖಾಸಿಂನಂತೆ ನಾನು ಕೂಡ ಸಾಯುತ್ತಿದ್ದೆ ಆದರೆ ದೇವರು ನನ್ನನ್ನು ಉಳಿಸಿದ. ಉತ್ತರ ಪ್ರದೇಶ ಸರಕಾರ ಹಾಗು ಆದಿತ್ಯನಾಥ್ ರಿಂದಾಗಿ ಮೋಟಾರ್ ಸೈಕಲ್ ಪ್ರಕರಣವೆಂದು ಹೇಳಿಕೊಂಡು ಪೊಲೀಸರು ಈ ಪ್ರಕರಣವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ" ಎಂದು ಸಮೀಯುದ್ದೀನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News