ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಸಬ್ ರಿಜಿಸ್ಟ್ರಾರ್ ಅಪಹರಣ

Update: 2018-07-15 16:04 GMT

ಬೆಂಗಳೂರು, ಜು.15: ಸಿನಿಮೀಯ ರೀತಿಯಲ್ಲಿಯೇ ಸಬ್ ರಿಜಿಸ್ಟ್ರಾರ್ ಒಬ್ಬರನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ 10 ಗಂಟೆಗೂ ಹೆಚ್ಚು ಕಾಲ ಸುತ್ತಾಡಿಸಿ ಹಲ್ಲೆ ನಡೆಸಿರುವ ಸಂಬಂಧ ಇಲ್ಲಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಂತಿನಗರದ ಉಪ ನೋಂದಣಾಧಿಕಾರಿ ರಂಗಸ್ವಾಮಿ ಎಂಬುವರನ್ನು ಅಪಹರಣ ಮಾಡಿ, ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ಪ್ರಕರಣದ ವಿವರ: ಜು.5ರಂದು ರಂಗಸ್ವಾಮಿ ಅವರು, ಶಾಂತಿನಗರದ ಕೆ.ಎಚ್.ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ ಅವರ ಮುಖಕ್ಕೆ ರಾಸಾಯನಿಕ ಸಿಂಪಡಿಸಿ ಕಣ್ಣಿಗೆ ಬಟ್ಟೆ ಕಟ್ಟಿದ್ದು, ಸಹಾಯಕ್ಕಾಗಿ ಅವರು ಜೋರಾಗಿ ಕೂಗಿದಾಗ ದುಷ್ಕರ್ಮಿಗಳು ಕಾರಿನ ಮ್ಯೂಸಿಕ್ ಸಿಸ್ಟಮ್ನ ಶಬ್ಧವನ್ನು ಜೋರು ಮಾಡಿ, ನಂತರ ಸುಮಾರು 10 ಗಂಟೆಗಳ ಕಾಲ ನಗರದ ಹೊರವಲಯದಲ್ಲಿ ಅವರನ್ನು ಸುತ್ತಾಡಿಸಿದ್ದಾರೆ ಎನ್ನಲಾಗಿದೆ.

ಬಳಿಕ ದುಷ್ಕರ್ಮಿಗಳು, ಉಪ ನೋಂದಣಾಧಿಕಾರಿ ರಂಗಸ್ವಾಮಿ ಅವರನ್ನು ಜನರನ್ನು ಶೋಷಿಸಿ, ಕಚೇರಿಯ ಸಿಬ್ಬಂದಿಗೆ ಕಿರುಕುಳ ನೀಡಬೇಡಿ ಎಂದೆಲ್ಲಾ ಹೇಳಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜು.6ರಂದು ಮುಂಜಾನೆ ಕನಕಪುರ ರಸ್ತೆಯಲ್ಲಿರುವ ಅವರ ಮನೆ ಸಮೀಪ ರಂಗಸ್ವಾಮಿ ಅವರನ್ನು ಬಿಟ್ಟು, ಪರಾರಿಯಾಗಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸರಿಗೆ ರಂಗಸ್ವಾಮಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News