30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಭದ್ರತಾ ವ್ಯವಸ್ಥೆ ದುರ್ಬಲ: ವರದಿ

Update: 2018-07-15 16:45 GMT

ಹೊಸದಿಲ್ಲಿ, ಜು.15: ದೇಶದ 34 ವಿಮಾನ ನಿಲ್ದಾಣಗಳಲ್ಲಿ ಸಿಸಿಟಿವಿ ವ್ಯಾಪ್ತಿಯಿಂದ ಹೊರಗಿರುವ ‘ಕಗ್ಗತ್ತಲ ವಲಯ’ಗಳು ಸೃಷ್ಟಿಯಾಗಿರುವುದು ವಿಮಾನ ನಿಲ್ದಾಣಗಳ ಭದ್ರತಾ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂದು ಸಿಐಎಸ್‌ಎಫ್‌ನ ವಾರ್ಷಿಕ ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.

ಜೊತೆಗೆ, ಬಾಂಬ್ ಪತ್ತೆ ಸಾಧನ, ವಾಕಿ-ಟಾಕಿ ಹಾಗೂ ಬ್ಯಾಗ್‌ಗಳ ಎಕ್ಸ್‌ರೇ ತಪಾಸಣಾ ಯಂತ್ರಗಳ ಕೊರತೆಯೂ ದೇಶದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಕಂಡು ಬಂದಿದೆ ಎಂದು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಎಸ್‌ಎಫ್)ನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

  ಭದ್ರತಾ ಮಾರ್ಗದರ್ಶಿ ಸೂತ್ರದ ಪ್ರಕಾರ ಸಿಸಿಟಿವಿ ದಾಖಲೆಗಳನ್ನು ಡಿಜಿಟಲ್ ವೀಡಿಯೊ ರೆಕಾರ್ಡಿಂಗ್ ಮೂಲಕ 30 ದಿನಗಳವರೆಗೆ ಉಳಿಸಿಕೊಳ್ಳಬೇಕು. ಆದರೆ ಏಳು ವಿಮಾನನಿಲ್ದಾಣಗಳಲ್ಲಿ ಡಿಜಿಟಲ್ ವೀಡಿಯೊ ರೆಕಾರ್ಡಿಂಗ್ ವ್ಯವಸ್ಥೆಯಿಲ್ಲ. 34 ವಿಮಾನ ನಿಲ್ದಾಣಗಳಲ್ಲಿ ಒಟ್ಟು 1,882 ಸಿಸಿಟಿವಿ ಕ್ಯಾಮೆರಗಳ ಅಗತ್ಯವಿದೆ. ಹಲವು ವಿಮಾನ ನಿಲ್ದಾಣಗಳಲ್ಲಿರುವ ಸಿಸಿಟಿವಿಯಲ್ಲಿ ಸಂಶಯಾಸ್ಪದ ವಸ್ತುಗಳು ಕಂಡುಬಂದರೆ ಅಲಾರ್ಮ್ ಮೊಳಗಿಸುವ ವ್ಯವಸ್ಥೆಯಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ದೇಶದಲ್ಲಿರುವ 98 ಕಾರ್ಯನಿರ್ವಹಿಸುವ ವಿಮಾನನಿಲ್ದಾಣಗಳ ಪೈಕಿ 60ರ ಭದ್ರತಾ ವ್ಯವಸ್ಥೆಯನ್ನು ಸಿಐಎಸ್‌ಎಫ್ ನಿರ್ವಹಿಸುತ್ತಿದೆ.

  ಕೆಲವೊಮ್ಮೆ ಪ್ರಯಾಣಿಕರನ್ನು ಪ್ರವೇಶ ದ್ವಾರದ ಬಳಿ ತಪಾಸಣೆ ನಡೆಸಲಾಗುತ್ತದೆ. ಇದಕ್ಕೆ ಎಕ್ಸ್‌ರೇ ಯಂತ್ರಗಳು, ಕೈಯಲ್ಲಿ ಹಿಡಿದುಕೊಳ್ಳುವ ಲೋಹಶೋಧಕಗಳು(ಎಚ್‌ಎಚ್‌ಎಂಡಿ), ಬಾಗಿಲುಗಳಿಗೆ ಅಳವಡಿಸಿರುವ ಲೋಹ ಶೋಧಕಗಳು(ಡಿಎಫ್‌ಎಂಡಿ), ಸ್ಫೋಟಕ ವಸ್ತುಗಳ ಪತ್ತೆ ಸಾಧನಗಳ(ಇಟಿಡಿ) ಅಗತ್ಯವಿದೆ. 26 ವಿಮಾನ ನಿಲ್ದಾಣಗಳಲ್ಲಿ 27 ಎಕ್ಸ್‌ರೇ ಯಂತ್ರಗಳು, ಮೂರು ವಿಮಾನ ನಿಲ್ದಾಣಗಳಲ್ಲಿ ಎಚ್‌ಎಚ್‌ಎಂಡಿಗಳು, ಎಂಟರಲ್ಲಿ ಡಿಎಫ್‌ಎಂಡಿಗಳು, 30 ವಿಮಾನ ನಿಲ್ದಾಣಗಳಲ್ಲಿ ಇಟಿಡಿಗಳ ಅಗತ್ಯವಿದೆ ಎಂದು ವರದಿ ತಿಳಿಸಿದೆ.

   ‘ಕಗ್ಗತ್ತಲ ವಲಯ’ ದಂತಹ ಸಮಸ್ಯೆಗಳ ಬಗ್ಗೆ ನಿಯತಕಾಲಿಕವಾಗಿ ಗಮನ ನೀಡಲಾಗುತ್ತದೆ ಎಂದು ದೇಶದ ನಾಗರಿಕ ವಾಯುಯಾನ ಮೂಲಸೌಕರ್ಯವನ್ನು ನಿರ್ವಹಿಸುತ್ತಿರುವ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ(ಎಎಐ)ದ ವಕ್ತಾರರು ತಿಳಿಸಿದ್ದಾರೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ. ಸಿಐಎಸ್‌ಎಫ್ ಹಾಗೂ ಸಂಬಂಧಿಸಿದ ವಿಮಾನ ನಿಲ್ದಾಣ ನಿರ್ದೇಶಕರು ನಿಯತಕಾಲಿಕ ಸಮೀಕ್ಷೆ ನಡೆಸಿ ಹೆಚ್ಚುವರಿ ಕ್ಯಾಮೆರಾ ಅಳವಡಿಸುವ ಬಗ್ಗೆ ನಿರ್ಧರಿಸಲಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ನಡೆಯುತ್ತಿರುವ ಪರಿಷ್ಕರಣ ಕಾರ್ಯದ ಕಾರಣ ‘ಕಗ್ಗತ್ತಲ ವಲಯ’ ನಿರ್ಮಾಣವಾಗಿರಬಹುದು. ಹೆಚ್ಚುವರಿಯಾಗಿ 402 ಎಕ್ಸ್‌ರೇ ಯಂತ್ರಗಳನ್ನು ಖರೀದಿಸಲಾಗಿದೆ. ವಿಮಾನನಿಲ್ದಾಣ ಭದ್ರತಾ ಸಮಿತಿ ಪ್ರತೀ ತಿಂಗಳೂ ಸಭೆ ಸೇರಿ ಭದ್ರತಾ ವ್ಯವಸ್ಥೆಯ ಪರಾಮರ್ಶೆ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News