ಸುಳ್ಳುಸುದ್ದಿಗಳು ಹಾನಿಕಾರಕ: ಪಾರಿಕ್ಕರ್

Update: 2018-07-15 16:53 GMT

ಪಣಜಿ,ಜು.15: ಇತರ ರಾಜ್ಯಗಳಿಂದ ಗೋವಾಕ್ಕೆ ಆಮದಾಗುತ್ತಿರುವ ಮೀನುಗಳಲ್ಲಿ ಫಾರ್ಮಾಲಿನ್ ಅಂಶವಿದೆ ಎಂಬ ವರದಿಗಳ ನಡುವೆಯೇ ರಾಜ್ಯದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು,ಸುಳ್ಳುಸುದ್ದಿಗಳು ಅಥವಾ ವದಂತಿಗಳು ಹಾನಿಯನ್ನುಂಟು ಮಾಡುತ್ತವೆ ಎನ್ನುವುದನ್ನು ಜನರು ಅರಿತುಕೊಳ್ಳಬೇಕು ಎಂದು ರವಿವಾರ ಇಲ್ಲಿ ಹೇಳಿದರು.

ಆಹಾರ ಮತ್ತು ಔಷಧಿ ಆಡಳಿತ(ಎಫ್‌ಡಿಎ)ವು ಮೀನುಗಳನ್ನು ತಪಾಸಣೆಗೊಳಪಡಿಸಿ ಫಾರ್ಮಾಲಿನ್ ಪತ್ತೆ ಹಚ್ಚಿದ ಬಳಿಕ ಶನಿವಾರ ಪಾರಿಕ್ಕರ್ ಅವರು, ಮೀನುಗಳಲ್ಲಿ ಫಾರ್ಮಾಲಿನ್ ವಿಷಯದ ಬಗ್ಗೆ ತಾನು ಖುದ್ದಾಗಿ ನಿಗಾಯಿರಿಸಿದ್ದೇನೆ ಎಂದು ಟ್ವೀಟಿಸಿದ್ದರು. ಆದರೆ ಮೀನುಗಳಲ್ಲಿ ಪತ್ತೆಯಾಗಿರುವ ಫಾರ್ಮಾಲಿನ್ ಅವುಗಳಲ್ಲಿ ನೈಸರ್ಗಿಕವಾಗಿ ಇರುವ ಈ ರಾಸಾಯನಿಕದ ಮಟ್ಟಕ್ಕೆ ಸಮನಾಗಿದೆ ಮತ್ತು ಹೆಚ್ಚುವರಿಯಾಗಿ ಫಾರ್ಮಾಲಿನ್ ಸೇರಿಸಿಲ್ಲ ಎಂದು ಎಫ್‌ಡಿಎ ನಂತರ ತಿಳಿಸಿತ್ತು.

ಗೋವಾದಲ್ಲಿಯ ಮೀನುಗಳು ಸುರಕ್ಷಿತವಲ್ಲ ಎಂಬ ವದಂತಿಗಳು ಹರಿದಾಡುವುದನ್ನು ನಿಲ್ಲಿಸಲು ತಾನು ಶನಿವಾರವೇ ಹೇಳಿಕೆಯನ್ನು ನೀಡಿ,ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ತಿಳಿಸಿದ್ದಾಗಿ ಇಲ್ಲಿ ಗೋವಾ ಐಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News