ತಿದ್ದುಪಡಿಯಿಂದ ಆರ್‌ಟಿಐ ಕಾಯ್ದೆ ದುರ್ಬಲ

Update: 2018-07-15 17:05 GMT

ಹೊಸದಿಲ್ಲಿ,ಜು.15: 2005ರ ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆಗೆ ತಿದ್ದುಪಡಿ ತರಲು ಮಸೂದೆಯೊಂದನ್ನು ಜು.18ರಿಂದ ಆರಂಭಗೊಳ್ಳುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸರಕಾರವು ನಿರ್ಧರಿಸಿದೆ. ಆರ್‌ಟಿಐ ಅಧಿಕಾರಿಗಳ ವೇತನ ಪರಿಷ್ಕರಣೆ ಮಾತ್ರ ಈ ಮಸೂದೆಯ ಉದ್ದೇಶವಾಗಿದೆ ಎಂದು ಸರಕಾರಿ ಮೂಲಗಳು ಈ ಮೊದಲು ಸುಳಿವು ನೀಡಿದ್ದವು. ಆದರೆ ಪ್ರತಿಪಕ್ಷಗಳು ಮತ್ತು ಆರ್‌ಟಿಐ ಕಾರ್ಯಕರ್ತರು ತಿದ್ದುಪಡಿಯು ಕಾಯ್ದೆಯನ್ನು ದುರ್ಬಲಗೊಳಿಸಬಹುದು ಎಂಬ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಆರ್‌ಟಿಐ ಕಾಯ್ದೆಯಡಿ ಕೇಂದ್ರದ ಮುಖ್ಯ ಮಾಹಿತಿ ಆಯುಕ್ತರು ಮುಖ್ಯ ಚುನಾವಣಾಧಿಕಾರಿಗಳಷ್ಟೇ ವೇತನವನ್ನು ಪಡೆಯುತ್ತಿದ್ದಾರೆ. ಇದೇ ವೇಳೆ ರಾಜ್ಯಗಳಲ್ಲಿ ಮಾಹಿತಿ ಆಯುಕ್ತರು ಚುನಾವಣಾ ಆಯುಕ್ತರಿಗೆ ಸಮನಾದ ವೇತನವನ್ನು ಪಡೆಯುತ್ತಿದ್ದಾರೆ.

ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಇರುವ ಸಂವಿಧಾನಿಕ ಸಂಸ್ಥೆಯಾಗಿದೆ ಮತ್ತು ಮಾಹಿತಿ ಆಯೋಗವು ಆರ್‌ಟಿಐ ಕಾಯ್ದೆಯಡಿ ದೂರುಗಳು ಮತ್ತು ಕೋರಿಕೆಗಳನ್ನು ಪರಿಶೀಲಿಸಲೆಂದು ರೂಪಿಸಲಾಗಿರುವ ಶಾಸನಾತ್ಮಕ ಸಂಸ್ಥೆಯಾಗಿದೆ. ಹೀಗಾಗಿ ಇವೆರಡೂ ಸಂಸ್ಥೆಗಳ ಅಧಿಕಾರಿಗಳ ವೇತನಗಳನ್ನು ಪರಸ್ಪರ ತಳುಕು ಹಾಕುವುದು ಸರಿಯಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಸಲಹೆ ನೀಡಿದೆ ಎಂದು ಸರಕಾರಿ ಮೂಲಗಳು ತಿಳಿಸಿದವು.

ಆರ್‌ಟಿಐ ಅಧಿಕಾರಿಗಳ ವೇತನಗಳನ್ನು ಸಂಸತ್ತಿನ ಬದಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧೀನಕ್ಕೆ ಒಳಪಡಿಸುವುದು ಬಲವಂತದ ಕ್ರಮವಾಗಬಹುದು ಮತ್ತು ಅದು ಸರಕಾರದ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳ ಸ್ವಾತಂತ್ರದ ಮೇಲೆ ಪ್ರಭಾವ ಬೀರಬಹುದು ಎನ್ನುವುದು ಆರ್‌ಟಿಐ ಕಾರ್ಯಕರ್ತರ ವಾದವಾಗಿದೆ.

ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಆರ್‌ಟಿಐ ಅರ್ಜಿಯ ಮೂಲಕ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದಿಂದ ಈ ಬಗ್ಗೆ ಮಾಹಿತಿಯನ್ನು ಕೋರಿದ್ದರಾದರೂ,ಮಸೂದೆಯು ಪರಿಶೀಲನೆಯ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅದು ಉತ್ತರಿಸಿದೆ.

ಮಸೂದೆ ಮಂಡನೆಗೆ ಮುನ್ನ ಪಾರದರ್ಶಕತೆ ಮತ್ತು ಸಾರ್ವಜನಿಕ ಸಮಾಲೋಚನೆಯ ಕೊರತೆಯನ್ನು ಟೀಕಿಸಿದ ಭಾರದ್ವಾಜ್,ಕಾಯ್ದೆಗೆ ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News