ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಜೆಎನ್‌ಯು ಪ್ರಾಧ್ಯಾಪಕ ಇಪಿಸಿಎದಿಂದ ವಜಾ

Update: 2018-07-15 17:26 GMT

ಹೊಸದಿಲ್ಲಿ,ಜು.15: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಜೆಎನ್‌ಯುದ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಪ್ರಾಧ್ಯಾಪಕ ಅತುಲ ಕುಮಾರ ಜೊಹ್ರಿ ಅವರನ್ನು ಕೇಂದ್ರವು ವಾತಾವರಣ ಮಾಲಿನ್ಯ(ತಡೆ ಮತ್ತು ನಿಯಂತ್ರಣ) ಪ್ರಾಧಿಕಾರ (ಇಪಿಸಿಎ)ದ ಸದಸ್ಯತ್ವದಿಂದ ವಜಾಗೊಳಿಸಿದೆ. ಪ್ರಾಧಿಕಾರವು ವಾಯು ಮಾಲಿನ್ಯವನ್ನು ತಡೆಯಲು ವಿವಿಧ ಕ್ರಮಗಳನ್ನು ಕೈಗೊಳ್ಳುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೊಹ್ರಿಯನ್ನು ಕಳೆದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.

ದಿಲ್ಲಿ ಉಚ್ಚನ್ಯಾಯಾಲಯವು ಇತ್ತೀಚಿಗೆ ಜೊಹ್ರಿ ವಿರುದ್ಧದ ದುರ್ವರ್ತನೆ ಆರೋಪದ ಕುರಿತು ತನ್ನ ತನಿಖೆಯನ್ನು ಪೂರ್ಣಗೊಳಿಸಲು ಜೆಎನ್‌ಯುದ ಆಂತರಿಕ ದೂರುಗಳ ಸಮಿತಿಗೆ ಎರಡು ವಾರಗಳ ಹೆಚ್ಚಿನ ಸಮಯಾವಕಾಶವನ್ನು ನೀಡಿದೆ.

ಕೆಲವು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಬಗ್ಗೆ ದೂರಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು,ಪ್ರಾಧ್ಯಾಪಕರು ಮತ್ತು ಮಹಿಳಾ ಹಕ್ಕುಗಳ ಸಂಘಟನೆಗಳು ಜೊಹ್ರಿ ಬಂಧನಕ್ಕೆ ಆಗ್ರಹಿಸಿದ್ದರು.

ಕೇಂದ್ರವು ತನ್ನ ಜು.4ರ ಅಧಿಸೂಚನೆಯಲ್ಲಿ ಜೊಹ್ರಿ ಜೊತೆಗೆ ಐಐಟಿ-ದಿಲ್ಲಿಯ ಪ್ರಾಧ್ಯಾಪಕ ಮುಕೇಶ ಖರೆ ಅವರನ್ನೂ ಇಪಿಸಿಎ ಸದಸ್ಯತ್ವದಿಂದ ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News