ಕೊನೇನ ಅಗ್ರಹಾರದಲ್ಲಿ ಮೆಟ್ರೋ ನಿಲ್ದಾಣ: ಜು.19ರಂದು ಸರಕಾರದ ಜೊತೆ ಇನ್ಫೋಸಿಸ್ ಒಡಂಬಡಿಕೆ

Update: 2018-07-16 07:10 GMT

ಬೆಂಗಳೂರು, ಜು.16: ಇನ್ಫೋಸಿಸ್ ವತಿಯಿಂದ ಕೊನೇನ ಅಗ್ರಹಾರದಲ್ಲಿ ನಿರ್ಮಿಸಲುದ್ದೇಶಿಸಿರುವ ಮೆಟ್ರೋ ನಿಲ್ದಾಣಕ್ಕೆ ಸಂಬಂಧಿಸಿ ಜು.19ರಂದು ನಡೆಯುವ 'ಎಂಒಯು' (ಒಡಂಬಡಿಕೆ) ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸೋಮವಾರ ಆಹ್ವಾನಿಸಿದರು.

ವಿಧಾನಸೌಧಕ್ಕೆ ಇಂದು ಭೇಟಿ ನೀಡಿದ ಸುಧಾಮೂರ್ತಿ ಅವರು ಡಿಸಿಎಂರಿಗೆ ನೂತನ ಯೋಜನೆಯ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.  ಇದೇ ವೇಳೆ ಇನ್ಫೋಸಿಸ್ ವತಿಯಿಂದ ಪೊಲೀಸ್ ಸಿಬ್ಬಂದಿಗೆ ವಸತಿ ಹಾಗೂ ಪೊಲೀಸ್ ಠಾಣೆ ನಿರ್ಮಿಸಿಕೊಡುವ ಬಗ್ಗೆ ಸುಧಾಮೂರ್ತಿ ಅವರೊಂದಿಗೆ ಚರ್ಚಿಸಿದರು.

ಈ ಬಗ್ಗೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸರಕಾರದ ವತಿಯಿಂದ ಪೊಲೀಸರಿಗೆ ಸದ್ಯ 11 ಸಾವಿರ ವಸತಿಗೃಹಗಳು ನಿರ್ಮಾಣವಾಗುತ್ತಿದ್ದು, ಈಗಾಗಲೇ 7 ಸಾವಿರ ವಸತಿ‌ ನಿರ್ಮಿಸಲಾಗಿದೆ. ಪೊಲೀಸರಿಗೆ ಸೂಕ್ತ ವಸತಿ ಸೌಲಭ್ಯ ನಿರ್ಮಿಸಿಕೊಡುವುದು ನಮ್ಮ‌ ಜವಾಬ್ದಾರಿ. ಇದಕ್ಕೆ ಕಾರ್ಪೋರೇಟ್ ಕಂಪೆನಿಗಳು ಜೊತೆಯಾದರೆ ಉತ್ತಮ ಸೌಲಭ್ಯ ಒದಗಿಸಿಕೊಡಲು ಸಾಧ್ಯ. ಇದಲ್ಲದೆ ಅಗತ್ಯವಿರುವೆಡೆ ಪೊಲೀಸ್ ಠಾಣೆಗಳ ನಿರ್ಮಾಣವೂ ಆಗಬೇಕಿದೆ. ಈ ಸಂಬಂಧ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತುಕತೆ ನಡೆಸಿದ್ದೇನೆ. ಅವರು ಕೂಡ ಧನಾತ್ಮಕವಾಗಿ ಸ್ಪಂದಿಸಿದ್ದಾರೆ‌ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News