ಕ್ರಿಕೆಟ್, ಕ್ರೀಡೆಗಳಲ್ಲಿ ದಲಿತ, ಆದಿವಾಸಿಗಳಿಗೆ ಹೆಚ್ಚಿನ ಅವಕಾಶ ಸಿಗಲಿ ಎಂದ ರಾಜ್ ದೀಪ್ ಸರ್ದೇಸಾಯಿ

Update: 2018-07-16 11:37 GMT

ಹೊಸದಿಲ್ಲಿ, ಜು.16: ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ದಲಿತರಿಗೆ ಮತ್ತು ಆದಿವಾಸಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ. ಹಲವರು ಸರ್ದೇಸಾಯಿ ಟ್ವೀಟ್ ಗೆ ಸಹಮತ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇದನ್ನು ವಿರೋಧಿಸಿದ್ದಾರೆ.

"ಫ್ರೆಂಚ್ ಫುಟ್ಬಾಲ್ ತಂಡದ ಹಿಂದಿನ ಯಶಸ್ಸಿಗೆ ಕಾರಣ ನಮ್ಮ ಕ್ರಿಕೆಟ್ ತಂಡದ ಹಾಗೆಯೇ ಇದೆ. ಫ್ರೆಂಚ್ ತಂಡದಲ್ಲಿರುವ ಹಲವು ವಿಧದ ಸಂಸ್ಕೃತಿಯ ಹಾಗೆ ನಾವು ಕ್ರೀಡೆಯನ್ನು ಪ್ರಜಾಪ್ರಭುತ್ವಗೊಳಿಸಿದ್ದೇವೆ. ಆದರೆ ನಾವಿನ್ನೂ ಹೆಚ್ಚಿನದ್ದನ್ನು ಮಾಡಬೇಕಾಗಿದೆ. 1947ರಿಂದ ಕೇವಲ ನಾಲ್ವರು ದಲಿತರು ಮಾತ್ರ ಆಡಿದ್ದಾರೆ. ಆದಿವಾಸಿಗಳು ಒಬ್ಬರೂ ಇಲ್ಲ" ಎಂದು ಸರ್ದೇಸಾಯಿ ಟ್ವೀಟ್ ಮಾಡಿದ್ದರು. ಕೂಡಲೇ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಟ್ರೋಲ್ ಪಡೆಗಳು, "ಇವರು ಯಾವಾಗಲೂ ಹಿಂದೂ ವಿರೋಧಿ", "ಈಗ ಕ್ರಿಕೆಟ್ ನಲ್ಲೂ ಮೀಸಲಾತಿ..... ನಮ್ಮ ಪ್ರತಿಭಾವಂತ ವೈದ್ಯರು, ಇಂಜಿನಿಯರ್ ಗಳಂತೆ ಕ್ರಿಕೆಟರ್ ಗಳೂ ದೇಶ ತೊರೆದು ಬೇರೆ ದೇಶಕ್ಕಾಗಿ ಆಡಬೇಕಾದೀತು", ಎಂದು ಟ್ವೀಟ್ ಮಾಡಿವೆ.

"ನಿಮ್ಮ ಬಗ್ಗೆ ನಿಮಗೆ ನಾಚಿಕೆಯಾಗುತ್ತಿಲ್ಲವೇ?, ದಲಿತರನ್ನು ಆಯ್ಕೆ ಮಾಡುತ್ತಿಲ್ಲ ಎಂದು ನೀವು ಹೇಳುತ್ತಿದ್ದೀರಾ?, ನಮ್ಮ ದೇಶಕ್ಕೆ ನಿಮ್ಮಂತಹವರು ಕೆಟ್ಟ ಹೆಸರು ತರುತ್ತಿದ್ದಾರೆ" ಎಂದು ಅಂಜನ್ ಎನ್ನುವವರು ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸರ್ದೇಸಾಯಿ, "ಕ್ರೀಡೆಗಳಲ್ಲಿ ದಲಿತರು ಹಾಗು ಆದಿವಾಸಿಗಳಿಗೆ ಸಮಾನ ಪ್ರವೇಶಾವಕಾಶ ಇಂದಿಗೂ ದೊರಕುತ್ತಿಲ್ಲ. ಪ್ರಮುಖವಾಗಿ ಕ್ರಿಕೆಟ್ ನಲ್ಲಿ. ಇದು ಕಟು ಸತ್ಯ. ಅದನ್ನು ಎದುರಿಸಿ, ಬದಲಾಯಿಸಿ" ಎಂದಿದ್ದಾರೆ.

ಈ ಟ್ವೀಟ್ ಗೂ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. "ರಾಜ್ ದೀಪ್ ದಯವಿಟ್ಟು 'ಪ್ರೈಮ್ ಟೈಮ್'ಗೆ ಆದಿವಾಸಿ ನಿರೂಪಕನನ್ನು ನೇಮಿಸಿ. ಮಾಧ್ಯಮದಲ್ಲೂ ಅವರಿಗೆ ಅರ್ಹತೆ ಇದೆ. ಮುಂದಿನ ಬಾರಿ ಬೇರೆಯದೇ ಮುಖ ನೋಡುತ್ತೇವೆ ಎಂಬ ನಂಬಿಕೆಯಿದೆ" ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, "ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೆವಾನಿಯಂತಹವರಿಗೆ ಎರಡು ಹೊತ್ತು ಊಟವೂ ಸಿಗುತ್ತಿಲ್ಲ. ನೀವು ಕ್ರಿಕೆಟ್ ಬಗ್ಗೆ ಚಿಂತಿತರಾಗಿದ್ದೀರಾ?" ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸರ್ದೇಸಾಯಿ. "ಮೇಲ್ವರ್ಗದ ಇಂಟರ್ ನೆಟ್ ಸೇನೆಗೆ ಸತ್ಯ ಹೇಳಿದರೆ ಹಿಡಿಸುವುದಿಲ್ಲ. ಭಾರತದಲ್ಲಿ 290 ಟೆಸ್ಟ್ ಕ್ರಿಕೆಟರ್ ಗಳು. ಅವರಲ್ಲಿ ಕೇವಲ ನಾಲ್ವರು ದಲಿತರು, ಇದು ಮೀಸಲಾತಿಗಾಗಿ ನಡೆದ ಚರ್ಚೆಯಲ್ಲ. ಕ್ರೀಡಾ ವ್ಯವಸ್ಥೆ ಪ್ರತಿಯೊಬ್ಬ ಭಾರತೀಯರಿಗೂ ಲಭಿಸಬೇಕು ಎನ್ನುವುದಕ್ಕಾಗಿ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News