ವಿಶ್ವಕಪ್ ಫುಟ್ಬಾಲ್ ರೋಚಕ ಅಂತ್ಯವೂ ಹಿಮಾ ದಾಸ್ ಗೆದ್ದ ಚಿನ್ನದ ಪದಕವೂ

Update: 2018-07-17 09:06 GMT

ಫ್ರಾನ್ಸ್ ಈಗ ವಿಶ್ವ ಫುಟ್ಬಾಲ್‌ನ ಚಾಂಪಿಯನ್ ತಂಡವಾಗಿದೆ. ಮುಂದಿನ ನಾಲ್ಕು ವರ್ಷ ಈ ಕೀರ್ತಿ ಹಾಗೂ ಚಾಂಪಿಯನ್‌ಗಳೆಂಬ ಕಿರೀಟವು ಫ್ರಾನ್ಸ್‌ನೊಂದಿಗಿರಲಿದೆ.

ಇಡೀ ಜಗತ್ತಿನ ಹೆಚ್ಚಿನಾಂಶವನ್ನು ಆವರಿಸಿಕೊಂಡಿದ್ದ ಫುಟ್ಬಾಲ್ ಜ್ವರ ಇದೀಗ ಬಿಡಲಿದೆ. ಈ ಫುಟ್ಬಾಲ್ ಜ್ವರ ಕಿರಿಕಿರಿ ಮಾಡುವಂತಹದ್ದಲ್ಲ. ಬದಲಾಗಿ ನೋಡುಗರಲ್ಲಿ ಸಂಭ್ರಮ ಉಕ್ಕಿಸುವ, ಕಾಡುವ, ಉದ್ವಿಗ್ನತೆಯಲ್ಲಿಡುವ ಮಹೋನ್ನತ ಕ್ರೀಡೆ.
ಫೇವರೀಟ್ ಟೀಂಗಳಲ್ಲಿ ಒಂದೆನಿಸಿಕೊಂಡು ಅಖಾಡಕ್ಕಿಳಿದಿದ್ದ ಫ್ರಾನ್ಸ್ ಈ ಟೂರ್ನಿಯಲ್ಲಿ ಆಡಿದ ಒಟ್ಟು ಆರು ಮ್ಯಾಚ್‌ಗಳಲ್ಲಿ ಒಂದರಲ್ಲೂ ಸೋಲಲಿಲ್ಲ. ಫೈನಲ್ ಮ್ಯಾಚ್‌ನಲ್ಲಿ ಕ್ರೊಯೇಶಿಯ ವಿರುದ್ಧ ಫ್ರಾನ್ಸ್ ತಂಡ ಅತ್ಯಂತ ಯೋಜನಾಬದ್ಧ ರೀತಿಯಲ್ಲಿ ಆಡಿ ವಿಶ್ವಾದ್ಯಂತ ಕೋಟ್ಯಂತರ ಜನರ ಮನಗೆದ್ದಿದೆ. ಈ ಗೆಲುವಿನಲ್ಲಿ ಫ್ರಾನ್ಸ್ ತಂಡದ ಆಟಗಾರರ ಪಾತ್ರ ಎಷ್ಟಿದೆಯೋ ಆ ತಂಡದ ಕೋಚ್ ಡಿಜೆ ಡೆಶಾಂಪ್ಸ್‌ರ ಪಾತ್ರವೂ ಅಷ್ಟೇ ಇದೆ.

ಒಂದು ಮ್ಯಾಚ್ ಶುರುವಾದಾಗ ದಾಳಿಯ ಹುಮ್ಮಸ್ಸಿನಿಂದ ಮೇಲೇರಿ ಬರುವ ಎದುರಾಳಿ ತಂಡದ ಆಟಗಾರರನ್ನು ಮೊದಲು ನಿಯಂತ್ರಿಸಿ ಆನಂತರ ತಮ್ಮ ತಂಡದ ಸ್ಥಾನ ಮರು ಪಡೆದು ಆಮೇಲೆ ಎದುರಾಳಿಗಳ ವಿರುದ್ಧ ಸಂಘಟಿತ ಹಾಗೂ ವ್ಯವಸ್ಥಿತ ದಾಳಿ ನಡೆಸಬೇಕೆಂಬುದು ಫ್ರೆಂಚ್ ಕೋಚ್ ಡೆಶಾಂಪ್ಸ್‌ರವರ ರಣನೀತಿಯಾಗಿತ್ತು. ಫ್ರಾನ್ಸ್ ಆಟಗಾರರು ತಮ್ಮ ಕೋಚ್‌ನ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಅಳವಡಿಸಿಕೊಂಡರು. ಹಾಗಾಗಿ ಆಟದ ಮೊದಲರ್ಧ ಮುಗಿದಾಗ ಚೆಂಡು ಹೆಚ್ಚಿನ ಅವಧಿ ಕ್ರೊಯೇಶಿಯ ಹತೋಟಿಯಲ್ಲೇ ಇತ್ತಾದರೂ ಫ್ರಾನ್ಸ್ ತಂಡ 2-1 ಗೋಲಿನಿಂದ ಮುಂದಿತ್ತು. ಕ್ರೊಯೇಶಿಯ ತಂಡ ಆ ಸ್ಕೋರ್‌ನಿಂದ ಅಧೀರರಾಗಲಿಲ್ಲ ಹಾಗೂ ತಮ್ಮ ಕೌಶಲ್ಯಗಳಿಂದ ಆಟದ ಕಾವನ್ನು ಹೆಚ್ಚಿಸುತ್ತಲೇ ಹೋಯಿತು. ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಇನ್ನೆರಡು ಮತ್ತು ಕ್ರೊಯೇಶಿಯ ಒಂದು ಗೋಲು ಹಾಕಿ ಕೊನೆಗೆ ಫಲಿತಾಂಶ ಈ ಕಾಲಘಟ್ಟದ ಅತ್ಯುತ್ತಮ ತಂಡ ಫ್ರಾನ್ಸ್ ಚಾಂಪಿಯನ್ ಆಗುವುದರೊಂದಿಗೆ ಕೊನೆಗೊಂಡಿದೆ. ರಶ್ಯಾದಲ್ಲಿ ಟೂರ್ನಿಗೆ ತೆರೆಯೆಳೆಯಲಾಗಿದ್ದರೂ ಸಹ ಈಗ ಫ್ರಾನ್ಸ್‌ನಾದ್ಯಂತ ಸಂಭ್ರಮಾಚರಣೆಯ ತೆರೆ ಮೇಲೇಳಲಿದೆ. ಅಲ್ಲಿನ ಜನ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹಾಡಿ, ಕುಣಿದು ಕುಪ್ಪಳಿಸುತ್ತಿದ್ದಾರೆ. ವಿಶ್ವಚಾಂಪಿಯನ್ ಎನಿಸಿಕೊಳ್ಳಲು ವಿಫಲರಾದರೂ ಸಹ ಕ್ರೊಯೇಶಿಯದ ಸಂಭ್ರಮಕ್ಕೇನು ಕಡಿಮೆಯಿಲ್ಲ. ಎರಡು ದಶಕಗಳ ಹಿಂದೆ ಅಂತರ್ಯುದ್ಧದಲ್ಲಿ ಸಿಲುಕಿ ನಲುಗಿ ಹೋಗಿದ್ದ ರಕ್ತಪಾತದ ನಡುವೆ ಜನಿಸಿರುವ ಕ್ರೊಯೇಶಿಯ ದೇಶವು ಯುರೋಪಿನ ಪುಟ್ಟ ದೇಶಗಳಲ್ಲಿ ಒಂದಾಗಿದೆ. ಆ ತಂಡವು ಫೈನಲ್‌ವರೆಗೆ ತಲುಪಿದ ಸಂಗತಿಯೇ ಅವರಿಗೊಂದು ರೋಚಕ ಸಾಹಸಗಾಥೆಯಂತಿದೆ. ವಿಶ್ವಾದ್ಯಂತ ಹಲವು ಫುಟ್ಬಾಲ್ ಪ್ರಿಯರು ಫೈನಲ್ ಮ್ಯಾಚ್‌ನಲ್ಲೂ ಕ್ರೊಯೋಶಿಯಗೆ ಬೆಂಬಲ ನೀಡುತ್ತಿದ್ದದ್ದೂ ಸಹ ಗಮನಾರ್ಹವಾಗಿತ್ತು. ಆಟದ ಕೌಶಲ್ಯ, ವೇಗ, ಟೆಕ್ನಿಕ್‌ಗಳು ಈ ತಂಡದ ಆಟಗಾರರನ್ನು ವಿಶಿಷ್ಟವೆನಿಸುವಂತೆ ಮಾಡಿದ್ದವು.

ಈಗಿನ ಟೂರ್ನಿಯಲ್ಲಿ ಅನೇಕ ಚಾಂಪಿಯನ್ ತಂಡಗಳು ಮಣ್ಣುಮುಕ್ಕಿದ್ದವು. ಅಸಂಖ್ಯ ಸ್ಟಾರ್ ಆಟಗಾರರು ವಿಫಲರಾಗಿದ್ದರು. ಮತ್ತೊಂದೆಡೆ ಬೆಲ್ಜಿಯಂ, ಕ್ರೊಯೋಶಿಯದಂತಹ ಯಾರೂ ಊಹಿಸಿರದಿದ್ದ ತಂಡಗಳು ಸೆಮಿಫೈನಲ್, ಫೈನಲ್ ತನಕ ಬಂದು ಇಂಗ್ಲೆಂಡ್ ಹಾಗೂ ಫ್ರಾನ್ಸ್‌ನಂತಹ ಪಳಗಿದ ಹುಲಿಗಳಿಗೆ ಸವಾಲೊಡ್ಡಿದ್ದವು. ಟೂರ್ನಿಯ ರೋಚಕ ಪೈಪೋಟಿಯಲ್ಲಿ ಹೊಸ ಸೂಪರ್‌ಸ್ಟಾರ್‌ಗಳಾಗಿ ನೇಮರ್, ಉಕಾಕು, ಬಾಪ್ಟೆ, ಕೇನ್, ಗ್ರಿಜ್‌ಮೆನ್ ಮುಂತಾದವರು ಜನರ ಮನ ಗೆದ್ದಿದ್ದಾರೆ.

ವಿಶ್ವಕಪ್ ಫುಟ್ಬಾಲ್ ಟೂರ್ನಿಯೆಂದರೆ ಅದೊಂದು ಸ್ಫೋಟಕಗಳು ತುಂಬಿರುವ ಮೈದಾನವಿದ್ದಂತೆ. ಅಲ್ಲಿ ಹಾರಿ, ತೇಲಿ ಚಲಿಸುವ ಚೆಂಡು ಒಂದು ಸಜೀವ ಬಾಂಬ್ ಇದ್ದಂತೆ. ಪ್ರತಿ ಬಾರಿಯೂ ಮಿಸೈಲ್‌ನಂತೆ ಗೋಲ್‌ನೆಡೆಗೆ ನುಗ್ಗಿ ಬರುವ ಬಾಲ್ ಕೋಟ್ಯಂತರ ಜನರ ಎದೆಬಡಿತವನ್ನೇ ಏರುಪೇರು ಮಾಡುವಂತಹದ್ದು. ಪುನಃ ಅಂತಹ ರೋಚಕ ಅನುಭವಕ್ಕಾಗಿ ನಾಲ್ಕು ವರ್ಷ ಕಾಯಲೇಬೇಕು. ಭಾರತದ ತಂಡವಿಲ್ಲ ಎನ್ನುವ ಕೊರತೆಯೊಂದು ಬಿಟ್ಟರೆ, ಫುಟ್ಬಾಲ್‌ನ್ನು ಭಾರತವೂ ಅತ್ಯಂತ ಸಂಭ್ರಮದಿಂದ ಆಚರಿಸಿದೆ. ಭಾರತವು ಯಾಕೆ ಒಂದು ತಂಡವನ್ನು ಕಟ್ಟುವಲ್ಲಿ ವಿಫಲವಾಗಿದೆ ಎನ್ನುವುದನ್ನು ಇದೇ ಸಂದರ್ಭವನ್ನು ಇಟ್ಟುಕೊಂಡು ನಾವು ಚರ್ಚಿಸಬೇಕಾಗಿದೆ. ಕ್ರಿಕೆಟ್ ಭ್ರಮೆಯಿಂದ ಹೊರಗೆ ಬಂದು, ಫುಟ್ಬಾಲ್ ಎನ್ನುವ ನೆಲದ ಆಟದ ಬಗ್ಗೆ ಆಸಕ್ತಿ ವಹಿಸಲು ಇದು ಸೂಕ್ತ ಸಮಯವಾಗಿದೆ.

 ಫುಟ್ಬಾಲ್ ಗದ್ದಲದ ನಡುವೆಯೇ, ಹಿಮಾ ದಾಸ್ ಎನ್ನುವ ಅಸ್ಸಾಂನ ಭತ್ತದ ಕೊಯ್ಲಿನೆಡೆಯಿಂದ ಬಂದ ಗ್ರಾಮೀಣ ತರುಣಿ ಭಾರತದ ಗಮನವನ್ನು ತನ್ನೆಡೆಗೆ ಸೆಳೆದಿದ್ದಾರೆ. ಫಿನ್ಲೆಂಡ್‌ನ ಟ್ಯಾಂಪಿಯರ್‌ನಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ಐಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಹಿಮಾದಾಸ್ ಚಿನ್ನ ಗೆದ್ದು ಐತಿಹಾಸಿಕ ದಾಖಲೆಯನ್ನು ಮಾಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನ ಅಥ್ಲೆಟಿಕ್ಸ್ ಟ್ರಾಕ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ಅವರು ಸಂಪಾದಿಸಿದರು. ಹಿಮಾ ಯಾವುದೇ ಅತ್ಯಾಧುನಿಕ ತರಬೇತಿಯಿಂದ ಅರಳಿದ ಪ್ರತಿಭೆಯಲ್ಲ. ಅಸ್ಸಾಮ್‌ನ ಕುಗ್ರಾಮವೊಂದರಲ್ಲಿ ರೈತನ ಮಗಳಾಗಿ ಜನಿಸಿದವಳು. ಗದ್ದೆಗಳಲ್ಲಿ ತಮ್ಮ ಸಹಪಾಠಿಗಳೊಂದಿಗೆ ಫುಟ್ಬಾಲ್ ಆಡುತ್ತಾ ಬೆಳೆದ ಈಕೆಯನ್ನು ಸ್ಥಳೀಯ ಕೋಚ್ ಒಬ್ಬ ಗುರುತಿಸಿ, ಪ್ರೋತ್ಸಾಹಿಸಿದ ಪರಿಣಾಮವಾಗಿಯೇ ಇಂದು ಭಾರತವೂ ಚಿನ್ನಗೆಲ್ಲುವಂತಾಯಿತು. ನಾವಿಂದು ಪ್ರತಿಭೆಗಳನ್ನು ನಗರಗಳಲ್ಲಿ ಹುಡುಕಾಡುತ್ತಿದ್ದೇವೆ. ಬದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ಶ್ರಮ ಸಂಸ್ಕೃತಿಯೊಂದಿಗೆ ಬೆಸೆದಿರುವ ತರುಣ ತರುಣಿಯಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಬೇಕು ಎನ್ನುವುದನ್ನು ಹಿಮಾದಾಸ್ ಸಾಧನೆ ಸಾರಿ ಹೇಳುತ್ತಿದೆ.

ಇದೇ ಸಂದರ್ಭದಲ್ಲಿ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಹಿಮಾ ಗೆಲುವನ್ನು ಪೂರ್ಣವಾಗಿ ಸಂಭ್ರಮಿಸುವ ಬದಲಾಗಿ, ಆಕೆಯ ತಪ್ಪು ಇಂಗ್ಲಿಷ್‌ನ್ನು ಎತ್ತಿ ಹಿಡಿದದ್ದು ನಮ್ಮ ಫೆಡರೇಷನ್‌ನ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳ ಕುರಿತಂತೆ ಅದು ಆಳದಲ್ಲಿ ಎಂತಹ ಧೋರಣೆಯನ್ನು ಹೊಂದಿದೆ ಎನ್ನುವುದನ್ನು ಇದು ಹೇಳುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾರತ ಯಾಕೆ ಹಿಂದುಳಿದಿದೆ ಎನ್ನುವುದಕ್ಕೆ ಇರುವ ಕಾರಣಗಳನ್ನು ಇದರಲ್ಲಿ ಹುಡುಕಬಹುದಾಗಿದೆ. ಕ್ರೊಯೇಶಿಯದಂತಹ ಪುಟ್ಟ ದೇಶ ಇಂದು ಫುಟ್ಬಾಲ್‌ನಲ್ಲಿ ವಿಶ್ವಕ್ಕೆ ಗುರುತಿಸಲ್ಪಡುತ್ತಿದೆ. ಕ್ಯೂಬಾದಂತಹ ದೇಶಗಳು ಒಲಿಂಪಿಕ್ಸ್ ನಲ್ಲಿ ಸಾಧನೆಗಳನ್ನು ಮಾಡುತ್ತಿವೆ. ಅವುಗಳಿಗೆ ಇಂಗ್ಲಿಷ್ ಗೊತ್ತಿಲ್ಲ. ಆದರೆ ಕ್ರೀಡೆ ಎಂದರೆ ಏನು ಎನ್ನುವುದು ಗೊತ್ತಿದೆ. ಇಂಗ್ಲಿಷ್ ತಲೆಗೆ ಹತ್ತಿರುವ ಅಧಿಕಾರಿಗಳನ್ನು ಭಾರತೀಯ ಅಥ್ಲೆಟಿಕ್ ಫೆಡರೇಶನ್‌ನಿಂದ ಮೊದಲು ಗುಡಿಸಿ ಶುಚಿಗೊಳಿಸಬೇಕು. ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕೆಲಸ ಆ ಮೂಲಕವೇ ಆರಂಭವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News