ನವಿಮುಂಬೈ: ನದಿನೀರಿನಲ್ಲಿ ಮುಳುಗಿದ ಕಾರು; ಕುಟುಂಬವನ್ನು ರಕ್ಷಿಸಿದ ಗ್ರಾಮಸ್ಥರು

Update: 2018-07-17 05:15 GMT

ನವಿ ಮುಂಬೈ, ಜು.17: ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನದಿ ನೀರಿನಲ್ಲಿ ಮುಳುಗಿದ್ದು, ಕಾರಿನಲ್ಲಿದ್ದ ಕುಟುಂಬ ಸದಸ್ಯರನ್ನು ಗ್ರಾಮಸ್ಥರು ಹಗ್ಗದ ಸಹಾಯದಿಂದ ರಕ್ಷಿಸಿದ ಘಟನೆ ನವಿ ಮುಂಬೈನ ತಲೋಜಾದಲ್ಲಿ ನಡೆದಿದೆ. ಗ್ರಾಮಸ್ಥರು ನದಿನೀರಿನಲ್ಲಿ ಸಿಲುಕಿದ್ದ ಕುಟುಂಬ ಸದಸ್ಯರನ್ನು ಪವಾಡ ಸದೃಶವಾಗಿ ರಕ್ಷಿಸುತ್ತಿರುವ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿಯಲಾಗಿದೆ.

ಕಾರು ನೀರಿನಲ್ಲಿ ಸಂಪೂರ್ಣ ಮುಳುಗಿಹೋಗಿದ್ದು ಕುಟುಂಬ ಸದಸ್ಯರು ತಮ್ಮ ರಕ್ಷಣೆಗೆ ಕಾರಿನ ಮೇಲ್ಘಾಗದಲ್ಲಿ ಕುಳಿತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಗ್ಗದ ಸಹಾಯದಿಂದ ನೀರಿನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಮೊದಲಿಗೆ ಮಹಿಳೆಯನ್ನು ಹಾಗೂ ಬಳಿಕ ಪುರುಷನನ್ನು ನೀರಿನಿಂದ ಹೊರ ತರಲಾಯಿತು.

ಕಾರು ನೀರಿನಲ್ಲಿ ಕೊಚ್ಚಿಹೋಗುವ ಮೊದಲು 37ರ ವಯಸ್ಸಿನ ಅಶ್ರಫ್ ಖಲೀಲ್ ಶೇಖ್ ಹಾಗೂ ಅವರ ಪತ್ನಿ ಹಮಿದಾ ಹಾಗೂ ಅವರ ಇಬ್ಬರು ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಶೇಖ್ ಕುಟುಂಬ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಮ್ಮಲೇ ಉಕ್ಕೇರಿದ ನದಿ ನೀರಿನಿಂದಾಗಿ ಸೇತುವೆಯಿಂದ ಕೆಳಗೆ ಬಿದ್ದಿತು. ತಲೋಜ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಕಾರಣ ನದಿ ನೀರಿನ ಮಟ್ಟ ಏರುತ್ತಿತ್ತು. ಅದೃಷ್ಟವಶಾತ್ ನದಿಗೆ ಬಿದ್ದ ಕಾರು ಕಲ್ಲೊಂದಕ್ಕೆ ತಾಗಿ ಸಿಲುಕಿಹಾಕಿಕೊಂಡಿತ್ತು. ಆಗ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ನಾರಾಯಣ ಪಾಟೀಲ್, ಲಾಹು ಪಾಟೀಲ್, ಲಕ್ಷ್ಮಣ್ ಧುಮಾಲ್, ತುಳಸೀರಾಮ್, ರೂಪೇಶ್ ಕುಟುಂಬ ರಕ್ಷಣೆಗೆ ಧಾವಿಸಿದ್ದರು. ನದಿ ನೀರಿನೊಳಗೆ ಬಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News