'ರಾಹುಲ್ ಗಾಂಧಿಯ ತಾಯಿ ವಿದೇಶಿ' ಎಂದ ಬಿಎಸ್ ಪಿ ನಾಯಕನನ್ನು ಪಕ್ಷದಿಂದ ವಜಾಗೊಳಿಸಿದ ಮಾಯಾವತಿ

Update: 2018-07-17 08:41 GMT

ಹೊಸದಿಲ್ಲಿ, ಜು.17: ರಾಹುಲ್ ಗಾಂಧಿಯವರ ತಾಯಿ ವಿದೇಶಿಯಾಗಿರುವುದರಿಂದ ರಾಹುಲ್ ಪ್ರಧಾನ ಮಂತ್ರಿಯಾಗಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ ಬಹುಜನ ಸಮಾಜ ಪಕ್ಷದ ಮುಖಂಡ ಜೈ ಪ್ರಕಾಶ್ ಸಿಂಗ್ ರನ್ನು ಪಕ್ಷದ ರಾಷ್ಟ್ರೀಯ ಸಂಘಟಕ ಹುದ್ದೆಯಿಂದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ವಜಾಗೊಳಿಸಿದ್ದಾರೆ.

"ಬಿಎಸ್ ಪಿ ರಾಷ್ಟ್ರೀಯ ಸಂಘಟಕ ಜೈ ಪ್ರಕಾಶ್ ಸಿಂಗ್ ರ ಮಾತುಗಳ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಅವರು ಬಿಎಸ್ಪಿಯ ಸಿದ್ಧಾಂತದ ವಿರುದ್ಧವಾಗಿ ಹಾಗು ವಿರೋಧ ಪಕ್ಷದ ನಾಯಕರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಸ್ಥಾನದಿಂದ ವಜಾಗೊಳಿಸಲಾಗಿದೆ" ಎಂದವರು ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ತಂತ್ರಗಾರಿಕೆಯನ್ನು ಚರ್ಚಿಸಲು ಆಯೋಜಿಸಲಾದ ಪಕ್ಷ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ್ದ ಬಿಎಸ್‌ಪಿ ರಾಷ್ಟ್ರೀಯ ಸಂಘಟಕ ಜೈ ಪ್ರಕಾಶ್ ಸಿಂಗ್, "ಮಾಯಾವತಿ ಈ ದೇಶದ ಪ್ರಧಾನಿಯಾಗಲು ಇದು ಸರಿಯಾದ ಸಮಯ’’ ಎಂದರಲ್ಲದೆ ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸುವ ಸಾಮರ್ಥ್ಯ ಅವರೊಬ್ಬರಿಗೆ ಮಾತ್ರವಿದೆ ಎಂದಿದ್ದರು.

ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳೂ ಇರುವ ಬಗ್ಗೆ ಸಿಂಗ್ ಮಾತನಾಡುತ್ತಾ ‘‘ರಾಹುಲ್ ತಮ್ಮ ತಂದೆಗಿಂತ ಹೆಚ್ಚಾಗಿ ತಮ್ಮ ತಾಯಿಯನ್ನು ಹೋಲುತ್ತಾರೆ. ಅವರ ತಾಯಿ ಒಬ್ಬರು ವಿದೇಶಿಯರಾಗಿರುವುದರಿಂದ ಅವರು ಯಾವತ್ತೂ ಪ್ರಧಾನಿಯಾಗುವುದಿಲ್ಲ’’ ಎಂದಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News