ಚಿತ್ರಕಲೆ, ಸಂಗೀತ ಕಲಾಪ್ರಕಾರಕ್ಕೆ ವಿಮರ್ಶೆ ಬೇಕಿಲ್ಲ: ಚಂದ್ರಶೇಖರ ಕಂಬಾರ

Update: 2018-07-17 12:46 GMT

ಬೆಂಗಳೂರು, ಜು.17: ಚಿತ್ರಕಲೆ ಹಾಗೂ ಸಂಗೀತ ಕಲಾ ಪ್ರಕಾರಗಳಿಗೆ ವಿಮರ್ಶೆಯ ಅಗತ್ಯವಿರುವುದಿಲ್ಲ. ವ್ಯಕ್ತಿಗಳ ಅನುಭವ ಹಾಗೂ ಗ್ರಹಿಸುವ ಜಾಣ್ಮೆಯ ಮೇಲೆ ಈ ಕಲಾ ಪ್ರಕಾರಗಳ ಸೃಜನಾತ್ಮಕತೆಯನ್ನು ಸವಿಯಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದರು.

ಮಂಗಳವಾರ ನರಗದ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಲಾವಿದ ಟಿ.ಎಸ್.ಜಯದೇವಣ್ಣರ ಮಂಡಲ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರು ತಮ್ಮ ಕನಸಿನ ಬೆನ್ನತ್ತಿ, ಅದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಸೃಜನಾತ್ಮಕತೆ ಮೈದಾಳುತ್ತದೆ ಎಂದು ತಿಳಿಸಿದರು

ಚಿತ್ರಕಲಾವಿದ ಜಯದೇವ ಸೃಷ್ಟಿಸುವ ಚಿತ್ರಕಲಾಕೃತಿಗಳು ಮಾನವನ ಅಸ್ತಿತ್ವದ ಅರ್ಥವನ್ನು ತಿಳಿಯಲು ತನ್ನ ಸೃಜನಾತ್ಮಕತೆಯನ್ನು ಪಣಕಿಟ್ಟಿದ್ದಾರೆ ಎಂದೆನಿಸದೆ ಇರದು. ಮನುಷ್ಯನ ಆತ್ಮದೊಳಗಿರುವ ಚಿಂತನೆಗಳು, ಅವು ವ್ಯಕ್ತವಾಗುವ ಬಗೆಯನ್ನು ತನ್ನ ಕುಂಚದಲ್ಲಿ ಮೂಡಿಸಿದ್ದಾರೆ. ಇವರ ಒಂದೊಂದು ಕಲಾಕೃತಿಯು ಹಲವು ಚಿಂತನೆಗಳನ್ನು ಮೂಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಅಭಿನಂದಿಸಿದರು.

ಹಿರಿಯ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಮಾತನಾಡಿ, ಯಾವುದೆ ಕಲಾಪ್ರಕಾರಗಳು ನಮ್ಮ ಪರಂಪರೆ, ವರ್ತಮಾನದ ಆಗುಹೋಗುಗಳು ಹಾಗೂ ಭವಿಷ್ಯದ ಕುರಿತು ಚಿಂತನೆಗೆ ಈಡು ಮಾಡಿದರೆ, ಅದು ಬಹುಕಾಲ ಉಳಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಂತಹ ಸೃಜನಾತ್ಮಕ ಕಲಾಕೃತಿಗಳನ್ನು ಕಲಾವಿದ ಟಿ.ಎಸ್.ಜಯದೇವಣ್ಣ ಪ್ರದರ್ಶನಕ್ಕಿಟ್ಟಿದ್ದಾರೆ ಎಂದು ಅಭಿನಂದಿಸಿದರು.

ಹಿಂದಿನ ದಿನಗಳಲ್ಲಿ ಚಿತ್ರಕಲೆಯನ್ನು ಹೆಣ್ಣಿನ ಸೌಂದರ್ಯ, ಹೂ, ತಿಳಿನೀರಿನ ಕೊಳ, ಹೀಗೆ ಸುಂದರವಾದ ವಸ್ತುಗಳಲ್ಲಿ ಬಂಧಿಸಿಡಲಾಗಿತ್ತು. ಆದರೆ, ಅಷ್ಟು ಮಾತ್ರ ಚಿತ್ರಕಲೆಯಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಅನುಭವ ಹಾಗೂ ಚಿಂತನೆಗಳನ್ನು ಚಿತ್ರಕಲಾ ಪ್ರಕಾರಗಳಲ್ಲಿ ಮೂಡಿಸುವುದು ಚಿತ್ರಕಲೆಯೆ ಎಂದು ಅವರು ಅಭಿಪ್ರಾಯಿಸಿದರು. ಈ ವೇಳೆ ಕಲಾಕೃತಿಕಾರ ಟಿ.ಎಸ್.ಜಯದೇವಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News