ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಲು ಸರಕಾರದ ಮುಖ್ಯ ಕಾರ್ಯದರ್ಶಿ ಕರೆ

Update: 2018-07-17 15:42 GMT

ಬೆಂಗಳೂರು, ಜು.17: ಇಂದ್ರಧನುಷ್ ಅಭಿಯಾನವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ. ಸರಕಾರದ ಎಲ್ಲ ಇಲಾಖೆಗಳು ಸಮನ್ವಯ ಹಾಗೂ ಸಹಕಾರ ಸಾಧಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಕರೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಗ್ರಾಮ ಸ್ವರಾಜ್ ಅಭಿಯಾನದಡಿ ಇಂದ್ರಧನುಷ್ ಅಭಿಯಾನವನ್ನು ಪರಿಣಾಮಕಾರಿ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಡೆದ ರಾಜ್ಯ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ ಮಾದರಿಯಲ್ಲೆ ರಾಜ್ಯದ ಇತರ 28 ಜಿಲ್ಲೆಗಳಲ್ಲೂ ಆರೋಗ್ಯಕರ ಮಕ್ಕಳನ್ನು ರೂಪಿಸಲು ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ಮುಂದಿನ ಮಾರ್ಚ್ ಮಾಸಾಂತ್ಯದೊಳಗೆ ರಾಜ್ಯದ 27 ಸಾವಿರ ಗ್ರಾಮಗಳಲ್ಲಿನ ಓರ್ವ ಸದಸ್ಯರು ಹಾಗೂ ಓರ್ವ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಪೂರ್ಣಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಪ್ರಸಕ್ತ ಸಾಲಿನ ಆ.15ರ ವೇಳೆಗೆ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕನಿಷ್ಠ ಎರಡು ಆರೋಗ್ಯ ಮತ್ತು ಸೌಖ್ಯ ಚಿಕಿತ್ಸಾಲಯಗಳು ಪ್ರಾರಂಭವಾಗಲಿವೆ. ಭಾರತ ಸರಕಾರದ ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ(ನೀತಿ ಆಯೋಗ) ಗುರುತಿಸಿ ಆಯ್ಕೆ ಮಾಡಿರುವ ರಾಷ್ಟ್ರದ 28 ರಾಜ್ಯಗಳ 115 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ(ಆಸ್ಪಿರೇಷನಲ್ ಡಿಸ್ಟ್ರಿಕ್ಟ್ಸ್) ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸೇರ್ಪಡೆಯಾಗಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ವಿಸ್ತೃತ ಗ್ರಾಮ ಸ್ವರಾಜ್ ಅಭಿಯಾನದಡಿ ಈ ಎರಡೂ ಜಿಲ್ಲೆಗಳಲ್ಲಿ ಜು.16, ಆ.13 ಹಾಗೂ ಸೆ.10ರಂದು ಒಟ್ಟಾರೆ ಮೂರು ಸುತ್ತುಗಳಲ್ಲಿ ಎರಡು ವರ್ಷ ವಯೋಮಾನದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಇಂದ್ರಧನುಷ್ ಅಭಿಯಾನದಡಿ ಲಸಿಕೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಆರೋಗ್ಯ ಮತ್ತು ಪೌಷ್ಠಿಕತೆಗೆ ಶೇ.30, ಶಿಕ್ಷಣಕ್ಕೆ ಶೇ.30, ಕೃಷಿ ಮತ್ತು ನೀರಾವರಿಗೆ ಶೇ.20, ಆರ್ಥಿಕ ಒಳಗೊಳ್ಳುವಿಕೆ ಹಾಗೂ ಕೌಶಲ್ಯ ರಚನೆ ಶೇ.10 ಹಾಗೂ ಕನಿಷ್ಠ ಮೂಲಸೌಕರ್ಯಗಳಿಗೆ ಶೇ.10ರ ಸಂಯುಕ್ತ ಸೂಚ್ಯಂಕದ ಆಧಾರದ ಮೇರೆಗೆ ರಾಷ್ಟ್ರದ ವಿವಿಧ ಜಿಲ್ಲೆಗಳಿಗೆ ನೀಡಲಾಗಿರುವ ಶ್ರೇಯಾಂಕದಂತೆ ರಾಯಚೂರು ಜಿಲ್ಲೆಗೆ 12 ಹಾಗೂ ಯಾದಗಿರಿ ಜಿಲ್ಲೆಗೆ 40ನೆ ಸ್ಥಾನ ಲಭಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ರಾಯಚೂರು ಜಿಲ್ಲೆಗೆ 11 ಹಾಗೂ ಯಾದಗಿರಿ ಜಿಲ್ಲೆಗೆ 55ನೆ ಶ್ರೇಯಾಂಕ ದೊರೆತಿದೆ. ಈ ಹಿನ್ನೆಲೆಯಲ್ಲಿ ಜೂ.1 ರಿಂದ ಆ.15ರವರೆಗೆ ಚಾಲ್ತಿಗೆ ಬಂದಿರುವ ವಿಸ್ತೃತ ಗ್ರಾಮ ಸ್ವರಾಜ್ ಅಭಿಯಾನದಂತೆ ರಾಜ್ಯದ ಈ ಎರಡೂ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿನ ಎಲ್ಲ ಗ್ರಾಮಗಳಲ್ಲೂ ಇಂದ್ರಧನುಷ್ ಅಭಿಯಾನದ ಮೂರೂ ಸುತ್ತುಗಳಲ್ಲೂ ಶೇಕಡಾ ನೂರಕ್ಕೆ ನೂರರಷ್ಟು ಪ್ರಗತಿಯನ್ನು ಸಾಧಿಸಬೇಕಿದೆ.

ಗಂಟಲು ಮಾರಿ(ಡಿಫ್ತೀರಿಯಾ), ನಾಯಿ ಕೆಮ್ಮು( ಪರ್ಟುಸಿಸ್), ಧನುರ್ವಾಯು (ಟೆಟಾನಸ್), ಯಕೃತ್ತಿನ ಉರಿ ಊತ(ಹೆಪಾಟೈಟಿಸ್-ಬಿ) ಹಾಗೂ ಹೀಮೋ ಫೀಲಸ್ ಇನ್‌ಫ್ಲೂಯೆಂಜಾ ಟೈಪ್ ಬಿ(ಹಿಬ್) ಶ್ವಾಸಕೋಶದ ಉರಿಊತ (ನ್ಯುಮೋನಿಯಾ) ಮತ್ತು ಮೆದುಳಿನ ರೋಗ(ಮೆನಂಜೈಟಿಸ್) ಸೂಕ್ಷ್ಮ ಕ್ರಿಮಿಗಳಿಂದ ಮಕ್ಕಳನ್ನು ರಕ್ಷಿಸಲು ಪೆಂಟಾವೆಲೆಂಟ್ ಲಸಿಕೆ ನೀಡುವ ಇಂದ್ರಧನುಷ್ ಅಭಿಯಾನ ಆರೋಗ್ಯ ಸಂಜೀವಿನಿಯಾಗಿದೆ ಎಂದರು.

ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಆಯ್ದ ಗ್ರಾಮಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ರಕ್ತ ಹೀನತೆ ಹಾಗೂ ಎಚ್‌ಐವಿ ಮತ್ತು ಏಡ್ಸ್‌ಗೆ ಸಂಬಂಧಿಸಿದಂತೆ ತಪಾಸಣೆ ಮಾಡಿ ಗುಣಮಟ್ಟದ ಪ್ರಸವಪೂರ್ವ ಆರೈಕೆ ಮಾಡಬೇಕಾಗಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಗಳಲ್ಲಿನ ಆರು ವರ್ಷ ವಯೋಮಾನದೊಳಗಿನ ಎಲ್ಲ ಮಕ್ಕಳಿಗೂ ಜನನದ ಸಂದರ್ಭದಲ್ಲಿ ಅಂಗವೈಕಲ್ಯಗಳು, ರೋಗಗಳು ಹಾಗೂ ಕೊರತೆಗಳ ಕುರಿತಂತೆ ಆರೋಗ್ಯ ತಪಾಸಣೆ ಮಾಡಬೇಕಾಗಿದೆ. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯ ಪ್ರಯುಕ್ತ ಆ.10ರಂದು 19 ವರ್ಷ ವಯೋಮಾನದೊಳಗಿನ ಎಲ್ಲರಿಗೂ ಔಷಧೋಪಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಲಕ್ಷ್ಯ ಪ್ರಮಾಣೀಕರಣ ಯೋಜನೆಯಡಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲೂ ಪ್ರಸವ ಕೊಠಡಿಗಳ ರಾಜ್ಯ ಮೌಲ್ಯಮಾಪನವನ್ನು ಪೂರ್ಣಗೊಳಿಸಬೇಕಾಗಿದೆ. ಆರು ತಿಂಗಳಿಂದ ಒಂದು ವರ್ಷ ವಯೋಮಾನದೊಳಗಿನ ಹಸುಗೂಸುಗಳ ಪೋಷಣೆ ಕುರಿತ ಮಾರ್ಗಸೂಚಿಗಳು ಹಾಗೂ ಅವರ ಕುಟುಂಬಗಳಿಗೆ ಸಮಾಲೋಚನಾ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಐದು ವರ್ಷ ವಯೋಮಾನದೊಳಗೆ ಏಳು ಬಾರಿ ಲಸಿಕೆ ನೀಡುವ ಇಂದ್ರಧನುಷ್ ಅಭಿಯಾನವನ್ನು ಜು.16ರಿಂದ 20 ರವರೆಗೆ, ಆ.13 ರಿಂದ 18 ರವರೆಗೆ ಹಾಗೂ ಸೆ.10 ರಿಂದ 15 ರವರೆಗೆ ಮೂರು ಸುತ್ತುಗಳಲ್ಲಿ ಆಯೋಜಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಹಿರಿಯ ಐಎಎಸ್ ಅಧಿಕಾರಿಗಳಾದ ರತನ್ ಖೇಲ್ಕರ್, ಅಮಲನ್ ಆದಿತ್ಯ ಬಿಸ್ವಾಸ್, ಎಂ.ಟಿ.ರೇಜು, ಡಾ.ಶಿವಶಂಕರ್ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News