ಮಾನಸಿಕ ಅಸ್ವಸ್ಥ ಬಾಲಕಿಯರಿಗೆ ಲೈಂಗಿಕ ಶೋಷಣೆ: ಐವರ ಬಂಧನ

Update: 2018-07-18 04:10 GMT

ಮಂಗಳೂರು, ಜು. 18: ಮೈಸೂರು ಮೂಲದ ಮೂವರು ಮಾನಸಿಕ ಅಸ್ವಸ್ಥ ಬಾಲಕಿಯರ ಮೇಲೆ ಎರಡು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಆರೋಪದಲ್ಲಿ ನಗರದ ಅಬನ್ (30) ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಮೈಸೂರಿನ ಉದಯಗಿರಿ ಮೂಲದವರಾದ 16,17 ಹಾಗೂ 18 ವಯಸ್ಸಿನ ಸಹೋದರಿಯರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲಾಗಿದೆ. ಮೈಸೂರು ಮೂಲದ ಒಡನಾಡಿ ಸೇವಾ ಸಂಸ್ಥೆಯ ನೆರವಿನಿಂದ ಪ್ರಕರಣ ಬೇಧಿಸಲಾಗಿದೆ. ಮೂವರು ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು ಎಂದು ಒಡನಾಡಿ ವಿವರಿಸಿದೆ.

ಆರ್ಥಿಕವಾಗಿ ಬಡಕುಟುಂಬಕ್ಕೆ ಸೇರಿದ ಈ ಮೂವರು ಬಾಲಕಿಯರ ಜತೆ ನೆರೆಯ ನಿವಾಸಿಯೊಬ್ಬ ಸ್ನೇಹ ಸಂಬಂಧ ಬೆಳೆಸಿದ. ಬಳಿಕ ಅವರಿಗೆ ಆಮಿಷವೊಡ್ಡಿ ನಾಲ್ವರು ಸ್ನೇಹಿತರ ಜತೆ ಭಟ್ಕಳ, ಮಂಗಳೂರು ಹಾಗೂ ಬೆಂಗಳೂರಿಗೆ ಕರೆದೊಯ್ದ. ಆರೋಪಿಗಳು ಬೆಂಗಳೂರು, ಮಂಗಳೂರು ಹಾಗೂ ಮಂಡ್ಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಾಲಕಿಯರು ನಾಪತ್ತೆಯಾದ ಬಳಿಕ ಮನೆಗೆಲಸ ಮಾಡುತ್ತಿದ್ದ ತಾಯಿ ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.

ಈ ಬಗ್ಗೆ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತರನ್ನು ಪತ್ತೆ ಮಾಡಿದ ಪೊಲೀಸರು ಕೌನ್ಸಿಲಿಂಗ್ ಮತ್ತು ಪುನರ್ವಸತಿಗಾಗಿ ಒಡನಾಡಿ ವಶಕ್ಕೆ ನೀಡಿದರು. ಕೌನ್ಸಿಲಿಂಗ್ ವೇಳೆ ತಮ್ಮ ವಿರುದ್ಧ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಬಾಲಕಿಯರು ಮಾಹಿತಿ ನೀಡಿದರು.

ಈ ಪೈಕಿ ಒಬ್ಬಳು ಬಾಲಕಿಯಿಂದ ಮಂಗಳವಾರ ಪ್ರಮುಖ ಆರೋಪಿಗೆ ಕರೆ ಮಾಡಿಸಿ ಆತನ ಜಾಡು ಹಿಡಿಯಲಾಯಿತು. ಆತ ಬಾಲಕಿಯರನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ ತಕ್ಷಣ ಮಂಗಳೂರು ನಗರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗಾಗಿ ಮೈಸೂರಿಗೆ ಕರೆದೊಯ್ದಿದ್ದಾರೆ ಎಂದು ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ವಿವರಿಸಿದ್ದಾರೆ.

ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದ ಜಾಗಗಳಿಗೆ ಬಾಲಕಿಯರು ಒಡನಾಡಿ ಸಂಸ್ಥೆಯವರನ್ನು ಕರೆದೊಯ್ದಿದ್ದು, ಕೆಲ ಲಾಡ್ಜ್‌ಗಳಿಗೆ ಕೂಡಾ ಕರೆದೊಯ್ದಿದ್ದರು. ಈ ಪೈಕಿ ಒಂದು ಲಾಡ್ಜ್ ಮೇಲೆ ಮಂಡ್ಯ ಪೊಲೀಸರು ದಾಳಿ ಮಾಡಿ ವೇಶ್ಯಾವಾಟಿಕೆ ಜಾಲ ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ವೇಶ್ಯಾವಾಟಿಕೆಗೂ ತಳ್ಳಲಾಗಿದೆ ಎನ್ನುವುದು ಖಚಿತವಾಗುತ್ತದೆ ಎಂದು ಸ್ಟ್ಯಾನ್ಲಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News