ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನಿಷೇಧ ಸಂವಿಧಾನದ ಆಶಯಗಳಿಗೆ ವಿರುದ್ಧ: ಸುಪ್ರೀಂ ಕೋರ್ಟ್

Update: 2018-07-18 16:16 GMT

ಹೊಸದಿಲ್ಲಿ, ಜು.18: ಕೇರಳದ ಐತಿಹಾಸಿಕ ಶಬರಿಮಲೆ ದೇವಾಲಯಕ್ಕೆ 10ರಿಂದ 50ರ ಹರೆಯದ ಒಳಗಿನ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ಬಗ್ಗೆ ಹಾಕಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಮಹಿಳೆಯರಿಗೆ ಪುರುಷರಷ್ಟೇ ಪ್ರಾರ್ಥನೆ ಮಾಡುವ ಹಕ್ಕಿದೆ ಮತ್ತು ಅದು ಕಾನೂನನ್ನು ಅವಲಂಬಿಸಿರಬಾರದು ಎಂದು ಬುಧವಾರ ತಿಳಿಸಿದೆ.

ಮಹಿಳೆಯಾಗಿ ನಿಮಗೂ ಪುರುಷರಷ್ಟೇ ಪ್ರಾರ್ಥಿಸುವ ಹಕ್ಕಿದೆ. ಅದನ್ನು ಮಾಡಲು ನಿಮಗೆ ಕಾನೂನಿನ ಅನುಮತಿ ಕೋರುವ ಅಗತ್ಯವಿಲ್ಲ ಎಂದು ನ್ಯಾಯಾಧೀಶ ಡಿ.ವೈ ಚಂದ್ರಚೂಡ್ ಅರ್ಜಿದಾರ ಮಹಿಳೆಗೆ ತಿಳಿಸಿದ್ದಾರೆ. ಯಾವ ಆಧಾರದಲ್ಲಿ ನೀವು ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸಿದ್ದೀರಿ. ಅದು ಸಂವಿಧಾನದ ವಿರುದ್ಧವಾಗಿದೆ. ಒಂದು ಬಾರಿ ದೇವಾಲಯವನ್ನು ಸಾರ್ವಜನಿಕರಿಗೆ ತೆರೆದ ನಂತರ ಅದಕ್ಕೆ ಯಾರು ಬೇಕಾದರೂ ಪ್ರವೇಶಿಸಬಹುದು ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತಿಳಿಸಿದ್ದಾರೆ.

10ರಿಂದ 50ರ ಹರೆಯದ ಮಹಿಳೆಯರಿಗೆ ಪ್ರವೇಶ ನಿರಾಕರಣೆಯ ಕಾನೂನಾತ್ಮಕತೆಯ ಬಗ್ಗೆ ಪರಿಶೀಲನೆ ನಡೆಸಲು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಸಾಂವಿಧಾನಿಕ ಪೀಠಕ್ಕೆ ಸೂಚಿಸಿತ್ತು. ನ್ಯಾಯಾಧೀಶರಾದ ಆರ್.ಎಫ್ ನಾರಿಮನ್, ಎ.ಎಂ ಖನ್ವಿಲ್ಕರ್, ಡಿ.ವೈ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರನ್ನೂ ಒಳಗೊಂಡ ಪೀಠವು ನಿಗದಿತ ಸಮಯದೊಳಗೆ ತಮ್ಮ ವಾದವನ್ನು ಮುಗಿಸುವಂತೆ ಅರ್ಜಿದಾರರ ವಕೀಲರಿಗೆ ಸೂಚಿಸಿತ್ತು. ಏಳು ಮಹಿಳಾ ಹೋರಾಟಗಾರರು ಶಬರಿಮಲೆ ದೇವಾಲಯಕ್ಕೆ ಪ್ರವೇಶ ನಿಷೇಧವನ್ನು ಪ್ರಶ್ನಿಸಿದ್ದಾರೆ. ಇದಕ್ಕೂ ಮೊದಲು ತಿರುವನಂತಪುರಂ ದೇವಸ್ವಂ ಮಂಡಳಿ (ಟಿಡಿಬಿ) ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ವಯಸ್ಸಿನ ಆಧಾರ ಪತ್ರ ತರುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News