ಒಂದು ವಾರದಲ್ಲಿ ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

Update: 2018-07-18 12:37 GMT

ಬೆಂಗಳೂರು, ಜು. 18: ‘ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಸಂಬಂಧ ಶೀಘ್ರದಲ್ಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಈಗಾಗಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಶೇ.25ರಷ್ಟು ಹಣ ಭರಿಸುವುದು ಎಂದು ಹೇಳಿದ್ದಾರೆ.

ಸಾರಿಗೆ ಇಲಾಖೆ ಶೇ.25ರಷ್ಟು ಹಣ ಭರಿಸಲಿದ್ದು, ಉಳಿದ ಶೇ.50ರಷ್ಟು ಹಣವನ್ನು ರಾಜ್ಯ ಸರಕಾರ ಭರಿಸಿದರೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಸಿದ್ಧ. ಹೊಸದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ರಾಜ್ಯಕ್ಕೆ ಹಿಂದಿರುಗಿಬಂದ ಬಳಿಕ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂಬಂಧ ಇನ್ನು ಒಂದು ವಾರದಲ್ಲಿ ನಾನು ಮತ್ತು ಶಿಕ್ಷಣ ಸಚಿವರು, ಸಿಎಂ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಗೆ ಕ್ರಮ ವಹಿಸಲಾಗುವುದು. ಉಚಿತ ಬಸ್‌ ಪಾಸ್‌ನಿಂದ ಸಾರಿಗೆ ಸಂಸ್ಥೆಗಳಿಗೆ 2 ಸಾವಿರ ಕೋಟಿ ರೂ.ಹೊರೆ ಬೀಳಲಿದೆ ಎಂದು ಹೇಳಿದರು.

ಬಸ್ ದರ ಏರಿಕೆ ಪ್ರಸ್ತಾವ: ಡಿಸೇಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಸಾರಿಗೆ ಬಸ್ ಪ್ರಯಾಣ ದರ ಶೇ.20ರಷ್ಟು ಹೆಚ್ಚಳ ಮಾಡಬೇಕೆಂಬ ಪ್ರಸ್ತಾವ ಇಲಾಖೆಯ ಮುಂದಿದ್ದು, ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮಣ್ಣ ತಿಳಿಸಿದರು.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳೂ ಡೀಸೆಲ್ ಮೇಲಿನ ತೆರಿಗೆಯನ್ನು ಪಾವತಿಸಬೇಕಿದೆ. ರಾಜ್ಯ ಸರಕಾರಕ್ಕೆ ವಾರ್ಷಿಕ 6 ಸಾವಿರ ಕೋಟಿ ರೂ.ಗಳಷ್ಟು ಆದಾಯವಿದ್ದು, 1 ಸಾವಿರ ಕೋಟಿ ರೂ.ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ತಮ್ಮಣ್ಣ ತಿಳಿಸಿದರು.

ಸೆಸ್‌ಗೆ ಪ್ರಸ್ತಾವ: ರಸ್ತೆ ಸೇರಿದಂತೆ ಮೂಲಸೌಲಭ್ಯ ಅಭಿವೃದ್ಧಿಗೆ ಬಿಬಿಎಂಪಿ ಸೆಸ್ ಸಂಗ್ರಹಿಸುತ್ತಿದ್ದು, ಅದೇ ಮಾದರಿಯಲ್ಲೆ ಸಾರಿಗೆ ಸೆಸ್ ಸಂಗ್ರಹಿಸಿಕೊಡಬೇಕು ಎಂದು ಆಗ್ರಹಿಸಿದ ಅವರು, ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬಿಎಂಟಿಸಿ ಕಾರ್ಯನಿರ್ವಹಿಸುತ್ತಿದೆ ಎಂದರು.

ನೇರ ನೇಮಕ?: ಸಾರಿಗೆ ಇಲಾಖೆಯಲ್ಲಿ 400 ಹುದ್ದೆಗಳು ಖಾಲಿ ಇದ್ದು, ಆ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಆರ್‌ಟಿಓ ಮತ್ತು ಟ್ರಾಫಿಕ್ ಇನ್ಸ್‌ಪೆಕ್ಟರ್ ಇಲ್ಲದ ಕಾರಣಕ್ಕೆ ಒಬ್ಬೊಬ್ಬ ಅಧಿಕಾರಿ 2-3 ಕಚೇರಿಯನ್ನು ನೋಡಿಕೊಳ್ಳಬೇಕಿದೆ ಎಂದರು.

ಸಹಜ: ಯಾವುದೇ ವ್ಯಕ್ತಿ ಮನಸ್ಸಿಗೆ ದುಃಖ ಆದಾಗ ಅತ್ತು ಬಿಡಬೇಕು. ಆಗಲೇ ಮನಸ್ಸಿಗೆ ಸಮಾಧಾನ. ಅದೇ ರೀತಿ ಸಿಎಂ ಭಾವನಾತ್ಮಕ ವ್ಯಕ್ತಿ. ಹೀಗಾಗಿ ಅವರು ಅಳುವಿನ ಮೂಲಕ ತಮ್ಮ ದುಃಖ ಶಮನ ಮಾಡಿಕೊಂಡಿದ್ದಾರೆ. ಅವರು ಯಾರ ಮೇಲೂ ಆರೋಪ ಮಾಡಿಲ್ಲ. ಯಾರು ತಮಗೆ ನೋವು ಕೊಟ್ಟಿದ್ದಾರೆ ಎಂದು ಹೇಳಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News