ಸಹಜ ಕೃಷಿ ಉತ್ತೇಜನಕ್ಕೆ 1000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ಗಾಗಿ ಮನವಿ: ಸಿ.ಎಂ ಕುಮಾರಸ್ವಾಮಿ

Update: 2018-07-18 14:45 GMT

ಹೊಸದಿಲ್ಲಿ, ಜು.18: ರಾಜ್ಯದಲ್ಲಿರುವ ಸುಮಾರು 70 ಲಕ್ಷ ಹೆಕ್ಟೇರ್ ಒಣ ಭೂಮಿಯಲ್ಲಿ ಕೃಷಿ ಕೈಗೊಂಡಿರುವ ಸುಮಾರು 60 ಲಕ್ಷ ರೈತರ ಜೀವನ ಮಟ್ಟವನ್ನು ಸುಧಾರಿಸಲು ಅನುವಾಗುವಂತೆ ಈ ಭೂಮಿಯಲ್ಲಿ ಕೈಗೊಳ್ಳುವ ಸಹಜ ಕೃಷಿಯ ಉತ್ತೇಜನಕ್ಕಾಗಿ 1000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಬುಧವಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್‌ರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ‘ರಾಜಸ್ಥಾನದ ನಂತರ ರಾಜ್ಯದಲ್ಲಿ ಅತೀ ಹೆಚ್ಚು ಪ್ರದೇಶದಲ್ಲಿ ಒಣಭೂಮಿ ಕೃಷಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಜ ಕೃಷಿಯನ್ನು ಸರಕಾರವು ಉತ್ತೇಜಿಸುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸರಕಾರವು ಸಹಜ ಕೃಷಿಗೆ ಶೇ.90ರಷ್ಟು ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ಅಗತ್ಯವಿರುವ 1000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮನವಿ ಮಾಡಿದರು.

ಮುಖ್ಯಮಂತ್ರಿಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಧಾ ಮೋಹನ್‌ ಸಿಂಗ್, ಕೇಂದ್ರ ಸರಕಾರವು ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ. ಸಹಜ ಕೃಷಿಯನ್ನು ಬೆಂಬಲಿಸುತ್ತಿದೆ. ಹೀಗಾಗಿ, ಅಗತ್ಯವಿರುವ ಅನುದಾನವನ್ನು ಒದಗಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಕಳೆದ 8 ವರ್ಷಗಳಲ್ಲಿ ಸತತವಾಗಿ 6 ವರ್ಷಗಳಿಂದ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ತಮ್ಮ ನೇತೃತ್ವದ ಸರಕಾರ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿದೆ. ಅಲ್ಲದೆ, ದೇಶದಲ್ಲಿ ವಿವಿಧ ರಾಜ್ಯಗಳ 24 ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಘೋಷಿಸಲಾಗಿದೆ. ಈ ಪೈಕಿ 16 ಜಿಲ್ಲೆಗಳು ಕರ್ನಾಟಕದಲ್ಲಿವೆ. ಇದಕ್ಕಾಗಿ ರಾಜ್ಯದ ರೈತರ ಹಿತವನ್ನು ಕಾಪಾಡಲು ಅನುವಾಗುವಂತೆ ತಮಗೆ ಸಹಕಾರ ನೀಡುವಂತೆ ಕುಮಾರಸ್ವಾಮಿ ಮನವಿ ಮಾಡಿದರು.

ರಾಜ್ಯದ ವಿವಿಧ ಬ್ಯಾಂಕುಗಳಿಂದ ಸುಮಾರು 48 ಲಕ್ಷ ರೈತರು ಒಟ್ಟಾರೆಯಾಗಿ 53 ಸಾವಿರ ಕೋಟಿ ರೂ.ಸಾಲ ಪಡೆದುಕೊಂಡಿದ್ದಾರೆ. ಈ ಪೈಕಿ ಶೇ.48 ರಷ್ಟು ಅಂದರೆ 23 ಲಕ್ಷದಷ್ಟು ರೈತರು ಸಹಕಾರಿ ಬ್ಯಾಂಕುಗಳಿಂದ 12 ಸಾವಿರ ಕೋಟಿ ರೂ.ಗಳ ಸಾಲವನ್ನು ಪಡೆದುಕೊಂಡಿದ್ದಾರೆ. ಒಟ್ಟು ಸಾಲದ ಪ್ರಮಾಣದ ಪೈಕಿ ಇದು ಶೇ. 20.75ರಷ್ಟಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿರುವ ಸಂಪನ್ಮೂಲದ ಕೊರತೆಯಿಂದ ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಬಾರ್ಡ್ ಬ್ಯಾಂಕುಗಳು ನೀಡುವ ಆರ್ಥಿಕ ಸಹಾಯದ ಪ್ರಮಾಣವನ್ನು ಶೇ.40 ರಿಂದ 75ಕ್ಕೆ ಏರಿಕೆ ಮಾಡಬೇಕು. ಇದರಿಂದ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರಿಗೆ ಅಗತ್ಯವಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ನೀಡಲು ಸಹಾಯಕವಾಗುತ್ತದೆ ಎಂದು ಮುಖ್ಯಮಂತ್ರಿ ಮಾಡಿದ ಮನವಿಗೆ ತಕ್ಷಣವೇ ಸ್ಪಂದಿಸಿದ ರಾಧಾ ಮೋಹನ್‌ ಸಿಂಗ್, ಈ ಪ್ರಮಾಣದನ್ನು ಶೇ.60ಕ್ಕೆ ಏರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ಕರ್ನಾಟಕವು ಮಾರುಕಟ್ಟೆಗಳ ಸುಧಾರಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ಹೀಗಾಗಿ, ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಚರಂಡಿ ಮತ್ತು ಹರಾಜು ಕಟ್ಟೆ ಮತ್ತು ಗೋದಾಮುಗಳ ನಿರ್ಮಾಣಕ್ಕಾಗಿ ಸುಮಾರು 600 ಕೋಟಿ ರೂ.ಗಳನ್ನು ಒದಗಿಸುವ ಮುಖ್ಯಮಂತ್ರಿಯ ಕೋರಿಕೆಯನ್ನು ಪರಿಶೀಲಿಸುವುದಾಗಿ ರಾಧಾ ಮೋಹನ್‌ ಸಿಂಗ್ ತಿಳಿಸಿದರು.

ರಾಜ್ಯದಲ್ಲಿ ನೆಫೆಡ್ ಸುಮಾರು 13.44 ಲಕ್ಷ ಕ್ವಿಂಟಾಲ್ ಕಡಲೆಯನ್ನು 2017-18ರಲ್ಲಿ ಖರೀದಿಸಿದೆ. ಇದಕ್ಕಾಗಿ ರೈತರಿಗೆ ಇನ್ನೂ 143 ಕೋಟಿ ರೂ.ಗಳ ಬಾಕಿಯನ್ನು ಅವರ ಖಾತೆಗೆ ಜಮೆ ಮಾಡಬೇಕಿದೆ. ಹೀಗಾಗಿ ನೆಫೆಡ್‌ಗೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ಕೃಷಿ ಸಚಿವರು ಈಗಾಗಲೇ ಮೊದಲ ಕಂತಿನ ರೂಪದಲ್ಲಿ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ ತಕ್ಷಣವೇ ಹಣ ಬಿಡುಗಡೆ ಮಾಡುವುದಾಗಿ ಭರವಸೆಯನ್ನು ನೀಡಿದರು.

ಬೆಲೆಗಳ ವೈಪರೀತ್ಯಕ್ಕೆ ಒಳಗಾಗುವ ಈರುಳ್ಳಿ, ಟೊಮೊಟೊ ಮತ್ತು ಆಲೂಗಡ್ಡೆಗೆ ಕನಿಷ್ಠ ಬೆಲೆಯನ್ನು ನಿಗದಿಗೊಳಿಸುವಂತೆ ತೋಟಗಾರಿಕಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಗೊಳಿಸುವುದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಚಿತ್ರದುರ್ಗದ ಚಳ್ಳಕೆರೆಯಲ್ಲಿ ಕೃಷಿ ವೈಜ್ಞಾನಿಕ ಸಂಶೋಧನಾ ಕೇಂದ್ರಗಳನ್ನು ತೆರೆಯುವ ಬಗ್ಗೆ ರಾಜ್ಯ ಸರಕಾರದ ಮನವಿಗೆ ಕೃಷಿ ಸಚಿವರು ಪರಿಶೀಲಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳೊಂದಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೃಷಿ ಸಚಿವ ಶಿವಶಂಕರರೆಡ್ಡಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News