ವಿದ್ಯಾರ್ಥಿಗಳ ಶುಲ್ಕದಿಂದ ಮೊದಲ ವರ್ಷ 100 ಕೋ.ರೂ. ಆದಾಯ ನಿರೀಕ್ಷಿಸಿದ ಪ್ರಸ್ತಾವಿತ ಜಿಯೋ ಇನ್‍ಸ್ಟಿಟ್ಯೂಟ್

Update: 2018-07-19 07:46 GMT

ಮುಂಬೈ , ಜು.19: ಪ್ರಸ್ತಾವಿತ ಜಿಯೋ ಇನ್‍ಸ್ಟಿಟ್ಯೂಟ್ ತನ್ನ ಮೊದಲ ವರ್ಷದಲ್ಲಿ ಸುಮಾರು 1,000 ವಿದ್ಯಾರ್ಥಿಗಳು ನೀಡುವ ಪ್ರವೇಶ ಶುಲ್ಕ ಮತ್ತು ಹಾಸ್ಟೆಲ್ ಶುಲ್ಕ ಸೇರಿ ಸುಮಾರು 100 ಕೋಟಿ ರೂ.  ಆದಾಯ ಗಳಿಸಬಹುದೆಂದು ಸರಕಾರಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ರಿಲಯನ್ಸ್ ಫೌಂಡೇಶನ್ ತಿಳಿಸಿದೆ.

ಸದ್ಯ ಕೇವಲ ಕಡತದಲ್ಲಿರುವ ಜಿಯೋ ಇನ್‍ಸ್ಟಿಟ್ಯೂಟ್  ಭಾರತ ಸರಕಾರದ ಶ್ರೇಷ್ಠ ವಿದ್ಯಾಸಂಸ್ಥೆ ಮಾನ್ಯತೆ ಪಡೆದ ಏಕೈಕ ಗ್ರೀನ್ ಫೀಲ್ಡ್ ಶಿಕ್ಷಣ ಸಂಸ್ಥೆಯಾಗಿದೆ. ಸರಕಾರ ಈಗಾಗಲೇ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್, ದಿಲ್ಲಿ, ಮುಂಬೈ ಐಐಟಿ, ಬಿಟ್ಸ್ ಪಳನಿ ಹಾಗೂ ಮಣಿಪಾಲದ 'ಮಾಹೆ' ಜತೆಗೆ ಜಿಯೋ ಇನ್‍ಸ್ಟಿಟ್ಯೂಟ್ ಗೂ ಇತ್ತೀಚೆಗೆ  ಶ್ರೇಷ್ಠ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡಿತ್ತು.

ಜಿಯೋ ಇನ್‍ಸ್ಟಿಟ್ಯೂಟ್ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ  ತನ್ನ ಮೊದಲ ಬ್ಯಾಚಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಿದೆ. ಮೊದಲ ವರ್ಷದಲ್ಲಿ ಅದು 38 ಕೋಟಿ ರೂ.ಗಳಷ್ಟು ಶುಲ್ಕವನ್ನು ವಿದ್ಯಾರ್ಥಿವೇತನ ಮೂಲಕ ನೀಡಲಿದ್ದು, ಇದರಿಂದ ತಲಾ  ವಿದ್ಯಾರ್ಥಿಯಿಂದ 6.2 ಲಕ್ಷ ರೂ.  ಆದಾಯ ಗಳಿಸಿದಂತಾಗುವುದು.

ಜಿಯೋ ಇನ್‍ಸ್ಟಿಟ್ಯೂಟ್  ನೈಸರ್ಗಿಕ ವಿಜ್ಞಾನ ವಿಷಯಗಳಲ್ಲಿ ಅತ್ಯಧಿಕ ಸೀಟುಗಳನ್ನು (300) ಒದಗಿಸಲಿದ್ದು, ಇದರ ನಂತರ ಕಂಪ್ಯೂಟರ್ ಸಾಯನ್ಸ್ ಆ್ಯಂಡ್ ಇಂಜಿನಿಯರಿಂಗ್ (250), ಹ್ಯೂಮಾನಿಟೀಸ್ (200), ಮ್ಯಾನೇಜ್ಮೆಂಟ್ ಆ್ಯಂಡ್ ಎಂಟ್ರಪ್ರನರ್‍ಶಿಪ್ (125), ಕಾನೂನು (90), ಮಾಧ್ಯಮ ಮತ್ತು ಪತ್ರಿಕೋದ್ಯಮ (60), ಲಲಿತ ಕಲೆಗಳು (50), ಕ್ರೀಡಾ ವಿಜ್ಞಾನ (80) ಹಾಗೂ ನಗರ ಯೋಜನೆ ಮತ್ತು ಆರ್ಕಿಟೆಕ್ಚರ್ (50) ವಿಷಯಗಳಿಗೆ ಆದ್ಯತೆ ನೀಡಲಾಗಿದೆ.

ಮೊದಲ ವರ್ಷದಲ್ಲಿ ಸಂಸ್ಥೆಯ ನಿರ್ವಹಣಾ ವೆಚ್ಚ 154 ಕೋಟಿ ರೂ. ಆಗಲಿದ್ದು ಇದರ ಪೈಕಿ ಶೇ.93ರಷ್ಟು ಹಣವನ್ನು  ಸಿಬ್ಬಂದಿ ವೇತನ ಮತ್ತಿತರ ಸವಲತ್ತುಗಳಿಗಾಗಿ  ಉಪಯೋಗಿಸಲಾಗಿವುದು. ವಿಶ್ವದ ಟಾಪ್ 500 ವಿಶ್ವವಿದ್ಯಾಲಯಗಳಿಂದ ಸಂಸ್ಥೆಗೆ ಶಿಕ್ಷಕರನ್ನು ನೇಮಿಸಲಾಗುವುದು ಎಂದು ರಿಲಯನ್ಸ್ ಫೌಂಡೇಶನ್ ಹೇಳಿದೆ.

ಸಂಸ್ಥೆಯ ಕಟ್ಟಡ ನವಿ ಮುಂಬೈ ಸಮೀಪದ ಕರ್ಜಟ್ ಎಂಬಲ್ಲಿ 800 ಎಕರೆ ಪ್ರದೇಶದಲ್ಲಿ ಬರಲಿದ್ದು  ಇದಕ್ಕಾಗಿ ರಿಲಯನ್ಸ್ ಫೌಂಡೇಶನ್ 9,500 ಕೋಟಿ ರೂ. ವ್ಯಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News